ಶಿವಮೊಗ್ಗ, ಮಾ 07 (DaijiworldNews/HR): ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡುವಂತೆ ಸಚಿವ ಕೆಎಸ್ ಈಶ್ವರಪ್ಪ ಅವರು ಆಗ್ರಹಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ವಿಮಾನ ನಿಲ್ದಾಣಕ್ಕ ಕೆಳದಿ ಸಾಮ್ರಾಜ್ಯವನ್ನು ಆಳಿದ ರಾಜಾರಾಂ ಅವರಿಗೆ ಆಶ್ರಯ ನೀಡಿದ ರಾಣಿ ಕೆಳದಿ ಚೆನ್ನಮ್ಮ ಅವರ ಹೆಸರಿಡುವಂತೆ ಕಾರ್ಯಕ್ರಮದ ಆಯೋಜಕರು ಸಲಹೆ ನೀಡಿದ್ದು, ಈ ಮಧ್ಯೆ ಕಾರ್ಯಕ್ರಮದಲ್ಲಿ ಮಾತನಾಡಿದ ಈಶ್ವರಪ್ಪ ಅವರು, ಯಡಿಯೂರಪ್ಪ ಅವರಂತಹ ನಾಯಕರನ್ನು ಪಡೆದ ಜಿಲ್ಲೆಯ ಜನತೆ ಅದೃಷ್ಟವಂತರು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ವಿಮಾನ ನಿಲ್ದಾಣಕ್ಕೆ ಹೆಸರಿಡಲು ಹಲವು ಹೆಸರುಗಳನ್ನು ಸೂಚಿಸಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರನ್ನು ಏಕೆ ಇಡಬಾರದು? ಎಂದು ಪ್ರಶ್ನಿಸಿದ್ದಾರೆ.
ಇನ್ನು ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ ಯಡಿಯೂರಪ್ಪ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದು ತಪ್ಪೇ? ನನ್ನ ಈ ಸಲಹೆಯಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತವೆ ಎಂಬುದು ನನಗೆ ಗೊತ್ತಿದೆ. ಇಂತಹ ಟೀಕೆಗಳನ್ನು ನಾನಾಗಲೀ ಯಡಿಯೂರಪ್ಪ ಆಗಲೀ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನಾವು ಬೆಳೆದಷ್ಟು ಜನರು ನಮ್ಮನ್ನು ಟೀಕಿಸುತ್ತಾರೆ ಎಂದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗದೇ ಹೋಗಿದ್ದರೆ ಜಿಲ್ಲೆಗೆ ವಿಮಾನ ನಿಲ್ದಾಣ ಬರುವುದು ಕನಸಾಗಿಯೇ ಉಳಿಯುತ್ತಿತ್ತು. ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರುವುದು ಸೂಕ್ತ ಎಂದಿದ್ದಾರೆ.