ನವದೆಹಲಿ, ಮಾ 07 (DaijiworldNews/MS): ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸುಮಾರು 35 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಉಕ್ರೇನ್ ನ ಯುದ್ಧ ಭೂಮಿಯಲ್ಲಿ ರಷ್ಯಾ ದಾಳಿಯ ನಂತ್ರ ಸಿಲುಕಿದ್ದಂತ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಾಸ್ ಸ್ಥಳಾಂತರಿಸಲು ಸಹಕರಿಸಿದಂತ ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದ್ದಾರೆ.
ಇದೇ ವೇಳೆ ಸುಮಿಯಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಉಕ್ರೇನ್ ಸರ್ಕಾರದಿಂದ ಪ್ರಧಾನಿ ನಿರಂತರ ಬೆಂಬಲವನ್ನು ಕೋರಿದ್ದಾರೆ ಎಂದು ತಿಳಿದುಬಂದಿದೆ. ಮಾತ್ರವಲ್ಲದೆ ರಷ್ಯಾ ಮತ್ತು ಉಕ್ರೇನ್ ನಡುವೆ ನೇರ ಮಾತುಕತೆ ಮುಂದುವರಿದಿರುವ ಬಗ್ಗೆಯೂ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಪರೇಷನ್ ಗಂಗಾ ಕಾರ್ಯಾಚರಣೆಯ ಅಡಿಯಲ್ಲಿ ಯುದ್ಧಪೀಡಿತ ಉಕ್ರೇನ್ನಿಂದ ತನ್ನ ಎಲ್ಲಾ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕಾರ್ಯ ಭಾರತ ಮಾಡುತ್ತಿದ್ದು, ಈಶಾನ್ಯ ಉಕ್ರೇನಿಯನ್ ನಗರವಾದ ಸುಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಶೀಘ್ರವಾಗಿ ಸ್ಥಳಾಂತರ ಕಾರ್ಯದತ್ತ ಭಾರತ ಸರ್ಕಾರ ಪ್ರಯತ್ನ ನಡೆಸುತ್ತಿದೆ.