ಕಲಬುರ್ಗಿ, ಮಾ 07 (DaijiworldNews/MS): ರಾಜ್ಯದಲ್ಲಿ ಅವಧಿಗೂ ಮೊದಲೇ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ನಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡದೆ ಬರೀ ಪ್ರಚಾರ ಅಂಶಗಳನ್ನು ಗಮನಿಸಿದಾಗ ವಿಧಾನಸಭೆಗೆ ಅವಧಿಗೂ ಮೊದಲೇ ಚುನಾವಣೆ ನಡೆಯುವ ಸಾಧ್ಯತೆಗಳು ಗೋಚರಿಸಿವೆ ಎಂದು ಸುಳಿವು ನೀಡಿದ್ದಾರೆ.
ಅವಧಿ ಪೂರ್ವ ಚುನಾವಣೆ ನಡೆದರೂ ಜೆಡಿಎಸ್ ಚುನಾವಣೆಯನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
"ಜೆಡಿಎಸ್ ಪಕ್ಷವನ್ನು ಕಾಂಗ್ರೆಸ್, ಬಿಜೆಪಿಯವರು ಬಳಸಿಕೊಂಡಿದ್ದಾರೆ. ಆದರೆ ನಮ್ಮ ಪಕ್ಷ ಯಾರಿಗೂ ಹತ್ತಿರ ಇಲ್ಲ. ಆದರೆ ಈ ಎರಡು ಯಾವಾಗ ಬೇಕೋ ಅವಾಗ ನಮ್ಮನ್ನು ರೈಟು, ಲೆಫ್ಟ್ ಗೆ ಉಪಯೋಗ ಮಾಡಿಕೊಳ್ಳಲು ಹತ್ತಿರ ಬರ ಮಾಡಿಕೊಳ್ಳುತ್ತಾರೆ. ನಮಗೆ ಎರಡೂ ಪಕ್ಷಗಳ ಅನುಭವವಾಗಿದೆ. ನಮಗೀಗ ಲೈಫ್ಟೂ ಬೇಡ, ರೈಟು ಬೇಡ. ನೇರ ಹೋಗೋಣವೆಂಬ ತೀರ್ಮಾನದಲ್ಲಿದ್ದೇವೆ "ಎಂದು ಎಚ್ ಡಿಕೆ ಸ್ಪಷ್ಟಪಡಿಸಿದ್ದಾರೆ.
ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಗಟ್ಟಿ ಅಂಶಗಳಿಲ್ಲ. ಜನಪ್ರಿಯತೆ ಹಿನ್ನೆಲೆಯಲ್ಲಿ ಬಜೆಟ್ ಮಂಡಿಸಲಾಗಿದೆ ಎಂದು ಟೀಕಿಸಿದ ಅವರು, ಜೆಡಿಎಸ್ ಪಕ್ಷ ಯಾವುದೇ ಪಕ್ಷದೊಂದಿಗೆ ಹತ್ತಿರವಾಗಿಲ್ಲ. ನಮಗೆ ಲೆಫ್ಟು ಬೇಡ, ರೈಟೂ ಬೇಡ. ಬಿಜೆಪಿಯೂ ಬೇಡ, ಕಾಂಗ್ರೆಸ್ ಬೇಡ, ನಾವು ನೇರವಾಗಿ ಚುನಾವಣೆ ಎದುರಿಸುತ್ತೇವೆ. ಇದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.