ನವದೆಹಲಿ, ಮಾ 07 (DaijiworldNews/MS): ಪ್ಯಾಲೆಸ್ತೀನ್ನಲ್ಲಿ ಭಾರತದ ಪ್ರತಿನಿಧಿ ಮುಕುಲ್ ಆರ್ಯ ಅವರ ಮೃತದೇಹ ರಮಲ್ಹಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪತ್ತೆಯಾಗಿದೆ. 2008 ರ ಬ್ಯಾಚ್ನ ಐಎಫ್ಎಸ್ ಅಧಿಕಾರಿ ಆರ್ಯ ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ.
ಮುಕುಲ್ ಸಾವಿಗೆ ಆಘಾತ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ , " ರಮಲ್ಹಾದಲ್ಲಿ ಭಾರತದ ಪ್ರತಿನಿಧಿಯ ನಿಧನದ ಬಗ್ಗೆ ತಿಳಿದು ತೀವ್ರ ಆಘಾತವಾಯಿತು. ಅವರೊಬ್ಬ ಉಜ್ವಲ ಮತ್ತು ಪ್ರತಿಭಾವಂತ ಅಧಿಕಾರಿಯಾಗಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
MEA ಯಲ್ಲಿ ವೃತ್ತಿ ರಾಜತಾಂತ್ರಿಕರಾಗಿದ್ದ ಮುಕುಲ್ ಆರ್ಯ ಅವರು ದೆಹಲಿಯಲ್ಲಿ ಸೇವೆ ಸಲ್ಲಿಸಿದ್ದಾರೆ, ಹಾಗೆಯೇ ಪ್ಯಾರಿಸ್ನಲ್ಲಿ ಯುನೆಸ್ಕೋಗೆ ಭಾರತದ ಖಾಯಂ ನಿಯೋಗದಲ್ಲಿ ಮತ್ತು ಕಾಬೂಲ್ ಮತ್ತು ಮಾಸ್ಕೋದಲ್ಲಿರುವ ಭಾರತದ ರಾಯಭಾರ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮುಕುಲ್ ಆರ್ಯ ಅವರು ಕರ್ತವ್ಯ ಸ್ಥಾನದಲ್ಲೇ ಸಾವಿಗೀಡಾಗಿರುವ ಬಗ್ಗೆ ಪ್ಯಾಲಸ್ತೀನ್ ಆಡಳಿತ ಕೂಡಾ ಆಘಾತ ವ್ಯಕ್ತಪಡಿಸಿದೆ. ಈ ನೋವಿನ ಸುದ್ದಿ ತಿಳಿದ ತಕ್ಷಣ, ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಹಾಗೂ ಪ್ರಧಾನಿ ಅವರು ಎಲ್ಲ ಭದ್ರತಾ ಸಿಬ್ಬಂದಿ, ಪೊಲೀಸರು ಮತ್ತು ಸಾರ್ವಜನಿಕ ಅಧಿಕಾರಿಗಳಿಗೆ, ಆರೋಗ್ಯ ಮತ್ತು ವಿಧಿವಿಜ್ಞಾನ ಔಷಧಿ ಇಲಾಖೆಯ ಅಧಿಕಾರಿಗಳು ತಕ್ಷಣ ಭಾರತದ ರಾಯಭಾರಿ ನಿವಾಸಕ್ಕೆ ಧಾವಿಸುವಂತೆ ಮತ್ತು ಸಾವಿನ ಪ್ರಕರಣದ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ" ಎಂದು ಸಚಿವಾಲಯ ಹೇಳಿಕೆ ನೀಡಿದೆ.