ಬೆಂಗಳೂರು, ಮಾ 06 (DaijiworldNews/HR): ಮೇಕೆದಾಟು ಯೋಜನೆ ವಿವಾದವನ್ನು ಕರ್ನಾಟಕ-ತಮಿಳುನಾಡು ಪರಸ್ಪರ ಚರ್ಚೆ ನಡೆಸುವ ಮೂಲಕ ಬಗೆಹರಿಸಿಕೊಳ್ಳುವಂತೆ ಕೇಂದ್ರ ಜಲಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ಅವರೇ ʼವಿವಾದʼ ಎನ್ನುವ ಮೂಲಕ ನಮ್ಮ ಜನರ ಕುಡಿಯುವ ನೀರಿನ ಯೋಜನೆಗೆ ʼಬಿಕ್ಕಟ್ಟಿನ ಲೇಪನʼ ಹಚ್ಚಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಎರಡೂ ರಾಜ್ಯಗಳು ಕುಳಿತು ಚರ್ಚೆ ಮಾಡಬೇಕೆಂದು ಒಮ್ಮತಕ್ಕೆ ಬರಬೇಕು ಎಂದು ಕೇಂದ್ರ ಸಚಿವರೇ ಹೇಳುವ ಮೂಲಕ, ಮೇಕೆದಾಟು ಯೋಜನೆ ಒಕ್ಕೂಟದ ವ್ಯವಸ್ಥೆಯ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕವಾಗಿ ನೀಡುವ ಹೊಣೆಗಾರಿಕೆಯಿಂದ ಕೇಂದ್ರ ಸರ್ಕಾರವನ್ನು ನುಣುಚಿಕೊಳ್ಳುತ್ತಿದೆ' ಎಂದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ ಎಂದರು.
ಮುಂಗಡ ಪತ್ರದಲ್ಲಿ ಯೋಜನೆಗೆ 1,000 ಕೋಟಿ ರೂ. ಕೊಟ್ಟೆವು ಎಂದು ಬಿಜೆಪಿ ಹಾಗೂ ನಮ್ಮ ಪಾದಯಾತ್ರೆಯಿಂದಲೇ ಹಣ ಘೋಷಿಸಲಾಯಿತು ಎಂದು ಕಾಂಗ್ರೆಸ್ ಕುಣಿಯುತ್ತಿದೆ. ಒಂದೇ ನಾಣ್ಯದ ಎರಡು ಮುಖಗಳಾದ ಎರಡೂ ರಾಷ್ಟ್ರೀಯ ಪಕ್ಷಗಳು, ಈಗ ಮೇಕೆದಾಟು ಇಟ್ಟುಕೊಟ್ಟುಕೊಂಡು 'ಚುನಾವಣಾ ಆಟ' ಶುರು ಮಾಡಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಾಸ್ತವ ಏನು ಎಂದು ನಾನು ಬಹಳ ಹಿಂದೆಯೇ ಹೇಳಿದ್ದೆ. ಕೇಂದ್ರದ ಕಾನೂನು ಸುಳಿಯಲ್ಲಿ ಸಿಕ್ಕಿರುವ ಹಾಗೂ ಕೇಂದ್ರದ ಜಲ ಆಯೋಗ(CWC)ದಲ್ಲಿ ಕೊಳೆಯುತ್ತಿರುವ ಮೇಕೆದಾಟು ಯೋಜನೆಯು ಪಾದಯಾತ್ರೆಯಿಂದ ಬರುವುದಿಲ್ಲ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿಯೇ ತಂದುಕೊಳ್ಳಬೇಕು ಎಂದಿದ್ದೆ. ಈಗ ಸಚಿವರಾದ ಶೇಖಾವತ್ ಅವರು; "ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ಕರ್ನಾಟಕ ಉಂಟು, ತಮಿಳುನಾಡು ಉಂಟು. ನೀವೇ ಮಾತನಾಡಿಕೊಳ್ಳಿ" ಎಂದು ಕೈ ಎತ್ತಿಬಿಟ್ಟಿದ್ದಾರೆ. ಹಾಗಾದರೆ, ಯೋಜನೆಗೆ ಒಪ್ಪಿಗೆ ನೀಡಿದರೆ ಕೇಂದ್ರ ಸರ್ಕಾರದ ಪಾತ್ರವೇ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.