ಮುಂಬೈ,, ಮಾ 06 (DaijiworldNews/DB): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲ್ಯಾನ್ ಸಾವಿನ ಕುರಿತು ಅಪನಿಂದೆಯ ಹೇಳಿಕೆ ನೀಡಿದ ಆರೋಪದ ಮೇಲೆ ಕೇಂದ್ರ ಸಚಿವರೊಬ್ಬರು ಮತ್ತವರ ಪುತ್ರನನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸುಶಾಂತ್ ಆತ್ಮಹತ್ಯೆ ಬಳಿಕ ದಿಶಾ ಸಾಲ್ಯಾನ್ ಬಹುಮಹಡಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದರು. ಈ ಸಾವು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತ್ತು. ದಿಶಾ ಸಾಲ್ಯಾನ್, ದಿ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಕುರಿತು ಅಪನಿಂದೆಯ ಹೇಳಿಕೆಗಳನ್ನು ನೀಡಿದ ಆರೋಪ ಕೇಂದ್ರ ಸಚಿವ ನಾರಾಯಣ ರಾಣೆ ಮತ್ತು ಅವರ ಶಾಸಕ ಪುತ್ರ ನಿತೇಶ್ ರಾಣೆ ಅವರ ಮೇಲಿತ್ತು.
ರಾಣೆ ಮತ್ತು ಅವರ ಪುತ್ರ ಪಶ್ಚಿಮ ಉಪನಗರದಲ್ಲಿರುವ ಮಾಲ್ವಾನಿ ಪೊಲೀಸ್ ಠಾಣೆಗೆ ಮಧ್ಯಾಹ್ನ 1.45 ರ ಸುಮಾರಿಗೆ ಆಗಮಿಸಿದ್ದರು. ಕೆಲ ಗಂಟೆಗಳ ಕಾಲ ಪೊಲೀಸರು ಈರ್ವರ ವಿಚಾರಣೆ ನಡೆಸಿದ್ದರು. ಈ ವೇಳೆ ಪೊಲೀಸ್ ಠಾಣೆ ಮುಂಭಾಗದಲ್ಲಿ ಸಚಿವರ ಬೆಂಬಲಿಗರೂ ಜಮಾಯಿಸಿದ್ದರು.
ಪುತ್ರ ನಿತೇಶ್ ರಾಣೆಗೆ ಗುರುವಾರ ಹಾಗೂ ಸಚಿವರಿಗೆ ಶುಕ್ರವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ನೊಟೀಸ್ ಕಳುಹಿಸಲಾಗಿತ್ತು. ಆದರೆ ರಾಜ್ಯ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಇಬ್ಬರು ನಾಯಕರು ಶನಿವಾರ ಹಾಜರಾಗಿದ್ದರು.
ಪೊಲೀಸ್ ಠಾಣೆಯಿಂದ ಹೊರಬಂದ ನಂತರ ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ರಾಣೆ, ದಿಶಾ ಸಾಲ್ಯಾನ್ ಮತ್ತು ರಜಪೂತ್ ಸಾವಿನ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎರಡು ಬಾರಿ ಕರೆ ಮಾಡಿ ಸಾವಿನ ಕುರಿತು ಮಾತನಾಡದಂತೆ ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ.