ನವದೆಹಲಿ, ಮಾ 05 (DaijiworldNews/DB): ಯುದ್ಧಗ್ರಸ್ಥ ಉಕ್ರೇನ್ ನ ಸುಮಿ ನಗರದಲ್ಲಿ ಕುಡಿಯುವ ನೀರಿಗಾಗಿ ಭಾರತೀಯ ವಿದ್ಯಾರ್ಥಿಗಳು ಹಿಮವನ್ನೇ ಕರಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಉಕ್ರೇನ್ನ ಸುಮಿ ಸ್ಟೇಟ್ ವಿಶ್ವವಿದ್ಯಾನಿಲಯದ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಕೈವ್ನಿಂದ ಸುಮಾರು 350 ಕಿಮೀ ದೂರದಲ್ಲಿರುವ ಸುಮಿಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಸ್ತುತ ಇಲ್ಲಿ ನೀರು ಸರಬರಾಜು ಬಂದ್ ಆಗಿರುವ ಕಾರಣ ಹಿಮವನ್ನೇ ಕರಗಿಸಿ ಕುಡಿಯಬೇಕಾದ ಪರಿಸ್ಥಿತಿ ಬಂದಿದೆ. ’ನಿನ್ನೆಯವರೆಗೂ 4 ಕಿಮೀ ನಡೆದು ನೀರು ತರುತ್ತಿದ್ದೆವು. ಆದರೆ ಇಂದು ಹಿಮಪಾತವಾಗಿರುವುದರಿಂದ ಅದನ್ನು ಕರಗಿಸಿ ಕುಡಿಯುತ್ತಿದ್ದೇವೆ’ ಎಂದು ಎಂಬಿಬಿಎಸ್ ವಿದ್ಯಾರ್ಥಿ ದುಮ್ಮಾಸಿಯಾ ಮರಿಯಾ ಮುನಾಫ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಾರತೀಯರು ನಡೆಸುತ್ತಿರುವ ಫಾರ್ಮಸಿ ಅಂಗಡಿಗಳಿಂದ ಆಲೂಗಡ್ಡೆ ಮತ್ತಿತರ ಖಾದ್ಯಗಳು ಸಿಗುತ್ತಿವೆ. ಆದರೆ ಎಲ್ಲರಿಗೂ ಸಾಕಾಗುತ್ತಿಲ್ಲ. ಈಗಾಗಲೇ ಕೆಲವರು ಅಸ್ತಮಾ, ಅಧಿಕ ರಕ್ತದೊತ್ತಡ ಮತ್ತು ಪ್ಯಾನಿಕ್ ಅಟ್ಯಾಕ್ನಂತಹ ಸಮಸ್ಯೆಗಳಿಗೆ ಒಳಗಾಗಿದ್ದಾರೆ ಎಂದು ವಿದ್ಯಾರ್ಥಿನಿ ಸ್ಮೃತಿ ನಟವರ್ಭಾಯ್ ಹೇಳುತ್ತಾರೆ.
ಭಾರತೀಯರ ಸ್ಥಳಾಂತರಕ್ಕಾಗಿ ಉಕ್ರೇನ್-ರಷ್ಯಾ ಗಡಿಯಲ್ಲಿ ಸುಮಾರು 130 ಬಸ್ಗಳು ನಿಂತಿವೆ ಎಂದು ತಿಳಿದುಬಂದಿದೆ. ಆದರೆ ಭಾರತ ಸರ್ಕಾರ ಅಥವಾ ಉಕ್ರೇನಿಯನ್ ಅಧಿಕಾರಿಗಳಿಂದ ಯಾವುದೇ ಮಾಹಿತಿ ನೀಡಿಲ್ಲ. ಬಟ್ಟೆ ಪ್ಯಾಕ್ ಮಾಡಿಕೊಂಡು ಸ್ವದೇಶಕ್ಕೆ ಹೊರಡಲು ಕಾಯುತ್ತಿದ್ದೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.