ನವದೆಹಲಿ, ಮಾ 05 (DaijiworldNews/MS): ಯುದ್ದಪೀಡಿತ ಉಕ್ರೇನ್ನಿಂದ ಸ್ಥಳಾಂತರಿಸಲು ಅನುಕೂಲವಾಗುವಂತೆ ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಆದೇಶಿಸಲಾಗಿದೆ ಎಂಬ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶನಿವಾರ ಘಟನೆಯನ್ನು ಖಂಡಿಸಿದ್ದು "ಇದು ಇಡೀ ದೇಶಕ್ಕೆ ಮಾಡಿದ ಅವಮಾನ" ಎಂದು ಹೇಳಿದ್ದಾರೆ.
ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಅವರು, "ಅಸಹಾಯಕ ವಿದ್ಯಾರ್ಥಿಗಳ ಜೊತೆಗಿನ ಇಂತಹ ನಾಚಿಕೆಗೇಡಿನ ವರ್ತನೆ ಇಡೀ ದೇಶಕ್ಕೆ ಮಾಡಿದ ಅವಮಾನ’ ಎಂದು ಕಿಡಿಕಾರಿದ್ದಾರೆ.ಆಪರೇಷನ್ ಗಂಗಾದ ಈ ಕಹಿ ಸತ್ಯವು ಮೋದಿ ಸರ್ಕಾರದ ನೈಜ ಮುಖವನ್ನು ತೋರಿಸಿದೆ"ಎಂದೂ ರಾಹುಲ್ ಟೀಕಿಸಿದ್ದಾರೆ. ತಮ್ಮ ಟ್ವೀಟ್ ನಲ್ಲಿ "ಶೌಚಾಲಯಗಳನ್ನು ಸ್ವಚ್ಛಗೊಳಿಸಲು ವಿದ್ಯಾರ್ಥಿಗಳಿಗೆ ಹೇಳಲಾಗಿದ್ದು, ಯಾರು ಮೊದಲು ಆ ಕೆಲಸ ಮಾಡುತ್ತಾರೆಯೋ ಅವರು ಮೊದಲು ಭಾರತಕ್ಕೆ ಹಿಂತಿರುಗುತ್ತಾರೆ" ಎಂಬ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿದ್ದಾರೆ.
ಇದಕ್ಕೂ ಮೊದಲು, ಉಕ್ರೇನ್ನಲ್ಲಿ ನಡೆಯುತ್ತಿರುವ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಮಧ್ಯೆ ಭಾರತೀಯ ಪ್ರಜೆಗಳನ್ನು ದೇಶಕ್ಕೆ ಮರಳಿ ಕರೆತರಲು ಪ್ರಾರಂಭಿಸಲಾದ ಆಪರೇಷನ್ ಗಂಗಾ ಕುರಿತು ಕಾಂಗ್ರೆಸ್ ಸಂಸದರು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದು, ‘ತೆರವು ಮಾಡುವುದು ಕರ್ತವ್ಯವೇ ಹೊರತು ಸರ್ಕಾರ ಮಾಡಿದ ಉಪಕಾರವಲ್ಲ’ ಎಂದು ಹೇಳಿದ್ದರು.
ರಷ್ಯಾ ಆಕ್ರಮಣದ ಹಿನ್ನೆಲೆಯಲ್ಲಿ ಉಕ್ರೇನ್ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆ ಹಿನ್ನೆಲೆಯಲ್ಲಿ ಫೆಬ್ರುವರಿ 24ರಿಂದ ಉಕ್ರೇನ್ನ ನೆರೆ ದೇಶಗಳಾದ ರೊಮೇನಿಯಾ, ಹಂಗೆರಿ, ಸ್ಲೋವಾಕಿಯಾ ಮತ್ತು ಪೋಲೆಂಡ್ನಿಂದ ಭಾರತೀಯರನ್ನು ತೆರವುಗೊಳಿಸಲಾಗುತ್ತಿದೆ. ಈ ಕಾರ್ಯಾಚರಣೆಗೆ ‘ಆಪರೇಷನ್ ಗಂಗಾ’ ಎಂದು ಹೆಸರಿಡಲಾಗಿದೆ. ಈ ನಡುವೆ ಉಕ್ರೇನ್ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರ ತನ್ನ ಪ್ರಯತ್ನಗಳನ್ನು ಚುರುಕುಗೊಳಿಸಿದೆ.