ಅಬುದಾಬಿ, ಮಾ 05 (DaijiworldNews/DB): ಯುಎಇಯಲ್ಲಿ ನೆಲೆಸಿರುವ ಕೇರಳ ಮೂಲದ ವ್ಯಕ್ತಿಯೋರ್ವರಿಗೆ ಎರಡನೇ ಬಾರಿಗೆ ಲಾಟರಿಯಲ್ಲಿ ಅದೃಷ್ಟ ಒಲಿದು ಬಂದಿದೆ. ಬಂಪರ್ ಬಹುಮಾನವಾಗಿ 1 ಕೋಟಿ ರೂ.ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಯುಎಇಯಲ್ಲಿ ಕಳೆದ 24 ವರ್ಷಗಳಿಂದ ಬಾಣಸಿಗರಾಗಿ ಕೆಲಸ ಮಾಡುತ್ತಿರುವ ಸೈದಾಲಿ ಕಣ್ಣನ್ ಅವರೇ ಬಿಗ್ ಟಿಕೆಟ್ ಡ್ರಾದ ಅದೃಷ್ಟಶಾಲಿ.
ಯುಎಇಯಲ್ಲಿ ನೆಲಿಸಿದ ಆರಂಭದ ದಿನಗಳಿಂದಲೇ ಅವರು ಲಾಟರಿ ಟಿಕೇಟ್ ಖರೀದಿಸುತ್ತಿದ್ದರು. ಈ ಹಿಂದೆ 1998ರಲ್ಲಿ ಲಾಟರಿಯಲ್ಲಿ ನಗದು ಗೆದ್ದಿದ್ದರು. ಇದೀಗ ಎರಡನೇ ಬಾರಿಗೆ ಅದೃಷ್ಟ ಖುಲಾಯಿಸಿದ್ದು, ಈ ಬಾರಿ ಕೋಟಿಯ ಒಡೆಯರಾಗಿದ್ದಾರೆ. ಯುಎಇ ಲಾಟರಿಯನ್ನು ಈ ಹಿಂದೆ ಇತರ ಭಾರತೀಯರು ಗೆದ್ದಿದ್ದರು.
’ಕಳೆದ ಇಪ್ಪತ್ತು ವರ್ಷಗಳಿಂದ ನಾನು ಸೈದಾಲಿ ಅವರೊಂದಿಗೆ ಟಿಕೆಟ್ ಖರೀದಿಸುತ್ತಿದ್ದೇನೆ. ಅವರು ತುಂಬಾ ಅದೃಷ್ಟವಂತರು’ ಎಂದು ಅವರ ಸ್ನೇಹಿತ ಆಬ್ದುಲ್ ಮಜೀದ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.