ವಾರಾಣಾಸಿ, ಮಾ 05 (DaijiworldNews/MS): ನಾನು ಬೇಕಿದ್ದರೆ ಸಾಯಲು ಸಿದ್ದನಿದ್ದೇನೆ, ಆದರೆ ಜನರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಗಳನ್ನು ಜಮಾ ಮಾಡುತ್ತೇನೆ ಎಂದು ನಾನು ಎಂದಿಗೂ ಸುಳ್ಳು ಹೇಳುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನಕ್ಕೆ ಮುನ್ನ ವಾರಣಾಸಿಯ ಪಿಂದ್ರಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶ , ರಾಜ್ಯದಲ್ಲಿ ಆಡಳಿತ ಪಕ್ಷವು "ಸುಳ್ಳಿನ ಆಧಾರದ ಮೇಲೆ" ಮತ ಕೇಳುತ್ತಿದೆ . ನಾನು ಸಾಯುತ್ತೇನೆ ಆದರೆ ನಿಮ್ಮ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಗಳನ್ನು ಜಮಾ ಮಾಡುತ್ತೇನೆ ಎಂದು ಎಂದಿಗೂ ಹೇಳುವುದಿಲ್ಲ, ಅದು ನಿಮಗೆ ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ ಇದಕ್ಕಾಗಿ ನಾನು ಹೆದರುವುದಿಲ್ಲ. ಯಾಕೆಂದರೆ ನಾನು ನಿಮ್ಮನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ಹಿಂದೂ ಧರ್ಮವನ್ನು ರಕ್ಷಿಸುತ್ತೇನೆ ಎಂದು ಪ್ರಧಾನಿ ಮೋದಿಯವರು ಮಾತೆತ್ತಿದ್ದರೆ ಸುಳ್ಳು ಹೇಳುತ್ತಾರೆ. ಆದರೆ ಅವರು ರಕ್ಷಿಸುವುದು ಹಿಂದೂ ಧರ್ಮವನ್ನಲ್ಲ, ಸುಳ್ಳನ್ನು ಎಂದು ಟೀಕಿಸಿದ್ದಾರೆ.
ಪ್ರಧಾನಿ ದೇಶದಾದ್ಯಂತ ಹೋದಲೆಲ್ಲಾ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ, ಹಿಂದೂ ಧರ್ಮ ಎಂದರೆ ಯಾವುದು ? ಹಿಂದೂ ಧರ್ಮವೆಂದರೆ " ಸತ್ಯ " ಅದು ಬಿಟ್ಟು ಬೇರೇನೂ ಅಲ್ಲ. ಅವರು ಹಿಂದೂ ಧರ್ಮದ ಹೆಸರಿನಲ್ಲಿ ಮತ ಕೇಳುವುದಿಲ್ಲ, ಆದರೆ ಸುಳ್ಳಿನ ಆಧಾರದ ಮೇಲೆ ಮತ ಕೇಳುತ್ತಾರೆ ಎಂದು ದೂರಿದ್ದಾರೆ.