ನವದೆಹಲಿ, ಮಾ 05 (DaijiworldNews/DB): ಯುದ್ಧಗ್ರಸ್ಥ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆ ತರಲು ಖಾರ್ಕೀವ್ ಮತ್ತು ಸುಮಿ ಪ್ರದೇಶಕ್ಕೆ ಬಸ್ ಗಳನ್ನು ಕಳುಹಿಸಿಕೊಡಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಪೂರ್ವ ಉಕ್ರೇನ್ ನ ಖಾರ್ಕೀವ್, ಪಿಸೋಚಿನ್ ಮತ್ತು ಸುಮಿ ಪ್ರದೇಶಗಳಲ್ಲಿ ಅತೀ ಹೆಚ್ಚು ಭಾರತೀಯರು ಸಿಲುಕಿಕೊಂಡಿದ್ದು, ಈ ಕಡೆ ಹೆಚ್ಚುಗಮನ ಕೊಡಲಾಗುತ್ತಿದೆ. ಸುಮಾರು 1000 ಮಂದಿ ಪಿಸೋಚಿನ್ ಮತ್ತು 700 ಮಂದಿ ಸುಮಿ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಈ ಭಾಗಕ್ಕೆ ಬಸ್ ಕಳುಹಿಸಿಕೊಡುವ ವ್ಯವಸ್ಥೆಆಗಿದ್ದು, ಈಗಾಗಲೇ ಐದು ಬಸ್ ಗಳು ಕಾರ್ಯಾಚರಣೆ ಆರಂಭಿಸಿವೆ. ಇನ್ನೂ ಹೆಚ್ಚಿನ ಬಸ್ ಗಳು ಕಾರ್ಯಾರಂಭ ಮಾಡಲಿವೆ ಎಂದವರು ತಿಳಿಸಿದ್ದಾರೆ.
ಭಾರತೀಯರನ್ನು ಕರೆ ತರಲು ವಿಶೇಷ ರೈಲು ವ್ಯವಸ್ಥೆ ಮಾಡುವಂತೆ ಈಗಾಗಲೇ ಉಕ್ರೇನ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಖಾರ್ಕಿವ್, ಸುಮಿ, ಮಾಸ್ಕೋವ್ ನಿಂದ ಭಾರತೀಯರನ್ನು ಕರೆ ತರಲು ಭಾರತೀಯ ವಾಯುಸೇನೆಯು ಎರಡು ಐಎಲ್-76 ವಿಮಾನವನ್ನು ಈಗಾಗಲೇ ನಿಗದಿಗೊಳಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.