ಬೆಂಗಳೂರು, ಮಾ 05 (DaijiworldNews/DB): ರಷ್ಯಾ ದಾಳಿಯಿಂದ ಉಕ್ರೇನ್ ನಲ್ಲಿ ಮೃತಪಟ್ಟಿರುವ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಜ್ಞಾನ ಗೌಡರ್ ಮನೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಚಲಗೇರಿ ಗ್ರಾಮದಲ್ಲಿರುವ ಮೃತ ನವೀನ್ ಮನೆಗೆ ಭೇಟಿ ಕೊಟ್ಟು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದೇನೆ. ಅಲ್ಲದೆ, ಕುಟುಂಬಸ್ಥರಿಗೆ ಪರಿಹಾರ ಚೆಕ್ ಈ ವೇಳೆ ನೀಡಲಾಗುವುದು ಎಂದರು.
ಉಕ್ರೇನ್ ನಿಂದ ಗಡಿಭಾಗಕ್ಕೆ ಬಂದ ಹಲವರನ್ನು ಈಗಾಗಲೇ ರಾಯಭಾರ ಕಚೇರಿ ಮೂಲಕ ಸುರಕ್ಷಿತವಾಗಿ ಕರೆ ತರಲಾಗಿದೆ. ಯುದ್ಧ ನಡೆಯುತ್ತಿರುವುದರಿಂದ ಇನ್ನು ಹಲವರಿಗೆ ಸ್ಥಳದಿಂದ ಹೊರಗಡೆ ಕಾಲಿಡಲಾಗದ ಪರಿಸ್ಥಿತಿ ಇದೆ. ಅಂತಹವರನ್ನು ಸುರಕ್ಷಿತವಾಗಿ ಕರೆ ತರಲು ರಾಯಭಾರ ಕಚೇರಿ ಪ್ರಯತ್ನ ಮಾಡುತ್ತಿದೆ. ವಿದೇಶಾಂಗ ಇಲಾಖೆ ಮತ್ತು ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಗಡಿಭಾಗದಲ್ಲಿರುವ ಮಂತ್ರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.