ಹೈದರಾಬಾದ್, ಮಾ 04 (DaijiworldNews/DB): ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ 'ಕವಚ್' ಸ್ವಯಂಚಾಲಿತ ರೈಲು ಸಂರಕ್ಷಣಾ (ಎಟಿಪಿ) ವ್ಯವಸ್ಥೆಯನ್ನು 2022-23ರಲ್ಲಿ 2000 ಕಿ.ಮೀ.ವರೆಗೆ ಅಳವಡಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ತಿಳಿಸಿದ್ದಾರೆ.
ಸಿಕಂದರಾಬಾದ್ ವಿಭಾಗದ ಲಿಂಗಂಪಲ್ಲಿ-ವಿಕಾರಾಬಾದ್ ನಡುವಿನ ‘ಕವಚ್’ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಶುಕ್ರವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷ 4000ದಿಂದ 5,000 ಕಿ.ಮೀ.ವರೆಗೆ ವಿಸ್ತರಣೆ ಮಾಡಲಾಗುವುದು. ಇದು ವಿಶ್ವದ ಅತ್ಯಂತ ಅಗ್ಗದ ರೈಲು ರಕ್ಷಣಾ ವ್ಯವಸ್ಥೆಯಾಗಿದೆ. ರೈಲುಗಳು ಮುಖಾಮುಖಿ ಡಿಕ್ಕಿಯಾಗುವುದನ್ನು ಈ ವ್ಯವಸ್ಥೆ ತಪ್ಪಿಸಲಿದೆ. ಆತ್ಮನಿರ್ಭರ್ ಭಾರತ್ ನ ಭಾಗವಾಗಿ 2022ರ ಕೇಂದ್ರ ಬಜೆಟ್ನಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು ಎಂದರು.
ಇದೇ ವೇಳೆ ಸಿಕಂದರಾಬಾದ್(Secunderabad) ಬಳಿ ಎರಡು ರೈಲುಗಳನ್ನು ಪರಸ್ಪರ ವಿರುದ್ಧ ದಿಕ್ಕಿನತ್ತ ವೇಗವಾಗಿ ಚಲಿಸಲು ಬಿಟ್ಟು ಈ ರಕ್ಷ ಕವಚವನ್ನು ಪರೀಕ್ಷಿಸಲಾಯಿತು. ಒಂದು ರೈಲಿನಲ್ಲಿ ರೈಲ್ವೆ ಸಚಿವರು, ಮತ್ತೊಂದು ರೈಲಿನಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷರು ಕುಳಿತಿದ್ದರು. ಆದರೆ ಸ್ವದೇಶಿ ನಿರ್ಮಿತ ಕವಚ ತಂತ್ರಜ್ಞಾನ ರೈಲುಗಳಲ್ಲಿ ಇರುವುದರಿಂದ ಎರಡೂ ರೈಲುಗಳು ಅಪಘಾತಕ್ಕೀಡಾಗಲಿಲ್ಲ.