ನವದೆಹಲಿ, ಮಾ 04 (DaijiworldNews/DB): ಉಕ್ರೇನ್ ನಲ್ಲಿ ಕ್ಷಣಕ್ಷಣಕ್ಕೂ ಜೀವಭಯ ಕಾಡುತ್ತಿದ್ದರೂ, ವಿದ್ಯಾರ್ಥಿಯೋರ್ವ ತಾನು ಸಾಕಿದ ಶ್ವಾನವನ್ನು ಬಿಟ್ಟು ಬರಲಾರದೆ ಅನುಮತಿಗಾಗಿ ಕಾದು ಇದೀಗ ಮುದ್ದಿನ ಶ್ವಾನದೊಂದಿಗೆ ಭಾರತಕ್ಕೆ ಮರಳಿದ್ದಾರೆ.
ಖಾರ್ಕಿವ್ ನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಉತ್ತರಾಖಂಡ್ ನ ಡೆಹ್ರಾಡೂನ್ ಮೂಲದ ರಿಷಬ್ ಕೌಶಿಕ್ ಅವರೇ ಮುದ್ದಿನ ಶ್ವಾನ "ಮಲಿಬು’ವಿನೊಂದಿಗೆ ಭಾರತಕ್ಕೆ ಬಂದ ವಿದ್ಯಾರ್ಥಿ. ಯುದ್ಧಗ್ರಸ್ಥ ಉಕ್ರೇನ ನಲ್ಲಿ ಕ್ಷಣಕ್ಷಣಕ್ಕೂ ಕಾಡುವ ಜೀವಭಯದಿಂದ ಒಮ್ಮೆ ಸ್ವದೇಶಕ್ಕೆ ಮರಳಿದರೆ ಸಾಕೆಂಬ ಮನಸ್ಥಿತಿಯಲ್ಲಿ ಭಾರತೀಯರು ಸೇರಿದಂತೆ ಹಲವು ಮಂದಿ ವಿದೇಶಿಗರಿದ್ದಾರೆ. ಆದರೆ ರಿಷಬ್ ಕೌಶಿಕ್ ಇಂತಹ ಭಯದ ನಡುವೆ ತಮ್ಮ ಜೀವದೊಂದಿಗೆ ತಾವು ಸಾಕಿದ ಮುದ್ದಿನ ಶ್ವಾನದ ಜೀವವೂ ಉಳಿಯಬೇಕೆಂಬ ನಿಟ್ಟಿನಲ್ಲಿ ಅನುಮತಿಗಾಗಿ ಸರ್ವ ಪ್ರಯತ್ನ ನಡೆಸಿ ಕೊನೆಗೂ ಭಾರತಕ್ಕೆ ಬಂದಿದ್ದಾರೆ.
"ಶ್ವಾನವನ್ನು ಭಾರತಕ್ಕೆ ಕರೆ ತರಲು ಸಾಕಷ್ಟು ದಾಖಲೆಗಳು ಬೇಕಿದ್ದವು. ಯುದ್ಧ ನಡೆಯುತ್ತಿರುವುದರಿಂದ ಅನುಮತಿ ಅತೀ ಅಗತ್ಯ. ಹಾಗಾಗಿ ಮೇಲ್ಮನವಿ ಸಲ್ಲಿಸಿದ್ದೆ. ಕೊನೆಗೂ ಅನುಮತಿ ಸಿಕ್ಕಿದ್ದರಿಂದ ಹಂಗೇರಿಯ ಬುಡಾಪೆಸ್ಟ್ ಮೂಲಕ ಸ್ವದೇಶಕ್ಕೆ ಮರಳಿದ್ದೇನೆ” ಎಂದು ತಿಳಿಸಿದ್ದಾರೆ.