ಬೆಂಗಳೂರು, ಮಾ 04 (DaijiworldNews/HR): ಬಸವರಾಜ ಬೊಮ್ಮಾಯಿ ಅವರು ಇಂದು ಮೊದಲ ಬಜೆಟ್ ಮಂಡನೆ ಮಾಡುತ್ತಿದ್ದು, ಜನರೂ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ನಿರೀಕ್ಷೆ ಈಡೇರಿಸಲು ಹಿಂದೆ ಇರುವವರು ಅನುಮತಿ ಕೊಡಬೇಕಲ್ವ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪರೋಕ್ಷವಾಗಿ ಆರ್ಎಸ್ಎಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಜೆಟ್ ನಲ್ಲಿ ಬಡಕುಟುಂಬಗಳಿಗೆ ಯಾವ ಕಾರ್ಯಕ್ರಮ ಕೊಡುತ್ತಾರೆಂದು ಕಾಯುತ್ತಿದ್ದೇನೆ. ಅವರ ಬುಟ್ಟಿಯಲ್ಲಿ ಯಾವ ಯಾವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ ನೋಡೋಣ ಎಂದರು.
ಇನ್ನುಕಾಂಗ್ರೆಸ್ ನಾಯಕರು ಪಾದಯಾತ್ರೆ ಮುಗಿಸಿ ಬಂದಿದ್ದಾರೆ. ಪಾದಯಾತ್ರೆ ಅನುಭವ ತೆಗೆದುಕೊಂಡು ಬಂದಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಎಂದು ಬಂದಿದ್ದಾರೆ. ದೇಹದಿಂದ ಬೆವರು ಸುರಿತು ಬಂದಿದ್ದಾರಾಲ್ವಾ? ನೀರು ಉಳಿಸಿಕೊಳ್ಳಲು ದಾಖಲೆ ಸಮೇತ ಚರ್ಚೆ ಮಾಡುತ್ತಾರೆಯೇ ಎಂದು ನೋಡೋಣ ಎಂದಿದ್ದಾರೆ.
ದೇವೇಗೌಡರು ಪ್ರಧಾನಿಯಾಗಿ 9 ಟಿಎಂಸಿ ನೀರು ಕೊಟ್ಟಿಲ್ಲ ಎಂದಿದ್ದರೆ ಆಗುತ್ತಿತ್ತಾ, ನಾನೇಕೆ ವಿರೋಧ ಮಾಡಲಿ? ಎಂದು ಪ್ರಶ್ನಿಸಿದ್ದಾರೆ.