ಬೆಂಗಳೂರು, ಮಾ 04 (DaijiworldNews/DB): ಕರ್ನಾಟಕ ಸರಕಾರದ 2022-23ನೇ ಸಾಲಿನ ಬಜೆಟ್ ನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ 12.30ಕ್ಕೆ ಮಂಡನೆ ಮಾಡಲಿದ್ದಾರೆ. ಬೊಮ್ಮಾಯಿ ಅವರಿಗೆ ಇದು ಚೊಚ್ಚಲ ಬಜೆಟ್ ಆಗಿದೆ.
ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇರುವುದರಿಂದ ಇಂದು ಮಂಡನೆಯಾಗುವ ಬಜೆಟ್ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಲೋಕೋಪಯೋಗಿ, ಕೃಷಿ, ರೈತರ ಕಲ್ಯಾಣ, ನೀರಾವರಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಬಜೆಟ್ ನಲ್ಲಿ ಒತ್ತು ಕೊಡುವ ಸಾಧ್ಯತೆ ಇದೆ.
ಈಗಾಗಲೇ ಮೇಕೆದಾಟು ಸಹಿತ ನೀರಾವರಿ ಯೋಜನೆಗಳ ಬಗ್ಗೆ ವಿಪಕ್ಷ ಕಾಂಗ್ರೆಸ್ ಹೋರಾಟ ನಡೆಸುತ್ತಿರುವುದರಿಂದ ನೀರಾವರಿ ಯೋಜನೆಗೆ ಸಾಕಷ್ಟು ಒತ್ತು ಕೊಡುವ ಸಾಧ್ಯತೆ ಇದೆ. ಅಲ್ಲದೆ ಉತ್ತರ ಕರ್ನಾಟಕ ಭಾಗದವರಾದ ಸಿಎಂ ಬೊಮ್ಮಾಯಿ ತವರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ.