ನವದೆಹಲಿ, ಮಾ 03 (DaijiworldNews/DB): ಯುದ್ಧಗ್ರಸ್ಥ ಉಕ್ರೇನ್ ನಿಂದ ಭಾರತೀಯರನ್ನು ಮರಳಿ ಕರೆ ತರಲು ಕೇಂದ್ರ ಸರಕಾರವು "ಆಪರೇಷನ್ ಗಂಗಾ’ ಕಾರ್ಯಾಚರಣೆಯಡಿ 80 ವಿಮಾನಗಳನ್ನು ನಿಗದಿಪಡಿಸಿದ್ದು, ಮಾರ್ಚ್ 10ರೊಳಗೆ ಈ ವಿಮಾನಗಳು ಸೇವೆಗೆ ಇಳಿದು ಭಾರತೀಯರನ್ನು ಕರೆ ತರುವ ಕೆಲಸದಲ್ಲಿ ನಿರತವಾಗಲಿವೆ. ಸರಾಸರಿ 17000 ಭಾರತೀಯರು ಈ ಕಾರ್ಯಾಚರಣೆಯಡಿ ಭಾರತಕ್ಕೆ ಮರಳಲಿದ್ದಾರೆ.
ಕೇಂದ್ರ ಸರಕಾರದಿಂದ ಈಗಾಗಲೇ ಉಕ್ರೇನ್ ನಿಂದ ಭಾರತೀಯರನ್ನು ಕರೆ ತರುವ ಕಾರ್ಯ ನಡೆಯುತ್ತಿದೆ. ಈ ಕಾರ್ಯಾಚರಣೆಯ ಭಾಗವಾಗಿ ಹೆಚ್ಚುವರಿ 80 ವಿಮಾನಗಳನ್ನು ನಿಗದಿಪಡಿಸಲಾಗಿದ್ದು, ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ವಿಮಾನಗಳು ಹಾರಾಟ ನಡೆಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ ಎಂಬುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಸುಮಾರು 25ಕ್ಕೂ ಹೆಚ್ಚು ಕೇಂದ್ರ ಸಚಿವರುಗಳು ಈಗಾಗಲೇ ಭಾರತೀಯರ ಸುರಕ್ಷತೆಯ ಸ್ಥಳಾಂತರ ಕೆಲಸದಲ್ಲಿ ನಿರತರಾಗಿದ್ದಾರೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್, ಇಂಡಿಗೋ, ಸ್ಪೈಸ್ ಜೆಟ್, ವಿಸ್ಟಾರ, ಗೋ ಏರ್ ಮತ್ತು ವಾಯುಪಡೆಯ ವಿಮಾನಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದೆ. ರೊಮೇನಿಯಾ ರಾಜಧಾನಿ ಬುಚರೆಸ್ಟ್ ನಿಂದ ಏರ್ ಇಂಡಿಯಾದ 14, ಏರ್ ಇಂಡಿಯಾ ಎಕ್ಸ್ ಪ್ರೆಸ್ ನ 8, ಇಂಡಿಗೋದ 7 ಮತ್ತು ಭಾರತೀಯ ವಾಯುಪಡೆಯ 1 ವಿಮಾನ ಸೇರಿ ಒಟ್ಟು 35 ವಿಮಾನಗಳು ಹಾರಾಟ ನಡೆಸಲಿವೆ.
ಹಂಗಾರಿಯ ರಾಜಧಾನಿ ಬುಡಾಪೆಸ್ಟ್ ನಿಂದ ಒಟ್ಟು 28 ವಿಮಾನಗಳು ಹಾರಾಟ ನಡೆಸಲಿದ್ದು, ಈ ಪೈಕಿ ಗೋ ಏರ್ ನ 15, ಇಂಡಿಗೋದ 9, ಏರ್ ಇಂಡಿಯಾದ 2, ಏರ್ ಫೋರ್ಸ್ನ 1, ಸ್ಪೈಸ್ ಜೆಟ್ ನ 1 ವಿಮಾನಗಳು ಸೇರಿವೆ. ರ್ಜೆಸ್ಜೋವ್ ಮತ್ತು ಪೋಲೆಂಡ್ ನಿಂದ ಒಟ್ಟು9 ವಿಮಾನಗಳು ಹಾರಾಟ ನಡೆಸಲಿದ್ದು, ಇದರಲ್ಲಿ 8 ಇಂಡಿಗೋ ಮತ್ತು 1 ಭಾರತೀಯ ವಾಯುಪಡೆಯ ವಿಮಾನ ಸೇರಿದೆ. 5 ವಿಮಾನಗಳು ಸ್ಕೇವಿಯಾ, ರೊಮೇನಿಯಾ, 3 ವಿಮಾನಗಳು ಕೋಸಿಸ್, ಸ್ಲೊವಾಕಿಯಾದಿಂದ ಹಾರಾಡಲಿವೆ.