ನವದೆಹಲಿ, ಮಾ 03 (DaijiworldNews/DB): ಆಪರೇಶನ್ ಗಂಗಾ ಕಾರ್ಯಾಚರಣೆ ಅಡಿಯಲ್ಲಿ ಭಾರತವು ಸುಮಾರು 3,726 ಜನರನ್ನು ಗುರುವಾರ ಉಕ್ರೇನ್ ನಿಂದ ಸ್ವದೇಶಕ್ಕೆ ಮರಳಿ ಕರೆ ತರಲಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
19 ವಿಮಾನಗಳ ಮೂಲಕ ಜನರನ್ನು ಸ್ವದೇಶಕ್ಕೆ ಮರಳಿ ಕರೆ ತರುವ ಕೆಲಸ ನಡೆಯುತ್ತಿದೆ. 8 ವಿಮಾನಗಳು ಇಂದು ಬುಚಾರೆಸ್ಟ್ ಗೆ ಬರಲಿದ್ದು, ಸುಮಾರು 1,800 ನಾಗರಿಕರು ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇದರಲ್ಲಿ ಭಾರತೀಯ ವಾಯುಪಡೆ, ಏರ್ ಇಂಡಿಯಾ ಮತ್ತು ಇಂಡಿಗೊ ವಿಮಾನಗಳು ಸೇರಿವೆ. ಇಂಡಿಗೊ ಸುಸೀವಾದಿಂದ ಎರಡು; ಸ್ಪೈಸ್ ಜೆಟ್ ಕೋಸಿಸ್ʼನಿಂದ ಒಂದು, ಭಾರತೀಯ ವಾಯುಪಡೆ, ಇಂಡಿಗೊ ಮತ್ತು ಏರ್ ಇಂಡಿಯಾದಿಂದ ಬುಡಾಪೆಸ್ಟ್ ನಿಂದ 5 ಮತ್ತು ಇಂಡಿಗೊದಿಂದ ರ್ಜೆಸ್ಜೋದಿಂದ ಮೂರು ಭಾರತಕ್ಕೆ ಬರಲಿವೆ.
ಬುಚಾರೆಸ್ಟ್ʼನಿಂದ ಬುಧವಾರ 6 ವಿಮಾನಗಳಲ್ಲಿ ಸುಮಾರು 1,300 ನಾಗರಿಕರನ್ನು ಸ್ವದೇಶಕ್ಕೆ ತಲುಪಿಸಲಾಗಿದೆ. ಬಾರ್ಡರ್ ಪಾಯಿಂಟ್ ಸಿರೆಟ್ʼಗೆ ನಾನೀಗ ತೆರಳುತ್ತಿದ್ದು, ಅಲ್ಲಿ 1000 ಮಂದಿ ವಿದ್ಯಾರ್ಥಿಗಳಿದ್ದಾರೆ ಎಂದು ಸಿಂಧಿಯಾ ರೊಮೇನಿಯಾದಲ್ಲಿ ತಿಳಿಸಿದ್ದಾರೆ ಎಂಬುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಸುಸಿಯಾವಾ ಸಿರೆಟ್ ಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಹಾಗಾಗಿ 2 ಇಂಡಿಗೊ ವಿಮಾನಗಳು ಸುಸೀವಾಗೆ ಪ್ರಯಾಣ ಬೆಳೆಸಿ ಸುಮಾರು 450 ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆದೊಯ್ಯುತ್ತವೆ. ಶುಕ್ರವಾರ 4 ವಿಮಾನಗಳು ಸುಸೀವಾಗೆ ಬರಲಿದ್ದು, ಸುಮಾರು 1000 ಮಂದಿ ವಿದ್ಯಾರ್ಥಿಗಳನ್ನು ಕರೆದೊಯ್ಯಲಿವೆ ಎಂದವರು ಮಾಹಿತಿ ನೀಡಿದ್ದಾರೆ.