ಬೆಂಗಳೂರು, ಮಾ 03 (DaijiworldNews/HR): ಬೆಂಗಳೂರಲ್ಲಿ ಪ್ರತಿಭಟನೆ, ಮೆರವಣಿಗೆಗೆ ಹೈಕೋರ್ಟ್ ನಿರ್ಬಂಧ ವಿಧಿಸಿದ್ದು, ಇನ್ಮುಂದೆ ಫ್ರೀಡಂಪಾರ್ಕ್ನ್ ನಿಗಧಿತ ಜಾಗದಲ್ಲಿ ಮಾತ್ರ ಪ್ರತಿಭಟನೆ, ಮೆರವಣಿಗೆಗೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯಿಂದಾಗಿ ಟ್ರಾಫಿಕ್ ಜಾಮ್ ಹಿನ್ನೆಲೆ ಐಪಿಎಲ್ ಸಲ್ಲಿಸಲಾಗಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದೆ.
ಇನ್ನು ಪ್ರತಿಭಟನೆ, ಮೆರವಣಿಗೆ ನಿಲ್ಲಿಸಲು ಸರ್ಕಾರಕ್ಕೆ ಸಾಧ್ಯವಿಲ್ಲವೇ? ಮೇಖ್ರಿ ಸರ್ಕಲ್, ಅರಮನೆ ಮೈದಾನದ ಬಳಿ ಜಾಮ್ ಆಗಿದೆ. ನ್ಯಾಯ ಗ್ರಾಮದಿಂದ ಹೈಕೋರ್ಟ್ಗೆ ಬರಲು ಒಂದು ಗಂಟೆಯಾಗಿದೆ. ಹೀಗಾದರೆ ಬೆಂಗಳೂರಿನ ಜನರು ಕೆಲಸ ಮಾಡುವುದು ಹೇಗೆ? ಇದೇ ಮೊದಲು ಪ್ರತಿಭಟನೆ ನಡೆಯುತ್ತಿಲ್ಲ. ಹಿಂದಿನಿಂದಲೂ ಪ್ರತಿಭಟನೆಗಳಿಂದ ಟ್ರಾಫಿಕ್ ಜಾಮ್ ಆಗ್ತಿದೆ. ಈಗ ಆಗದಿದ್ದರೆ ಇನ್ಯಾವಾಗ ಕ್ರಮ ಕೈಗೊಳ್ಳುತ್ತೀರಿ? ಎಂದು ರಾಜ್ಯ ಸರ್ಕಾರವನ್ನ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣಕುಮಾರ್ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿದೆ.
ಸಂಚಾರಕ್ಕೆ ಅಡ್ಡಿಯಾಗುವ ಸ್ಥಳಗಳಲ್ಲಿ ಧರಣಿ, ಪ್ರತಿಭಟನೆ, ಪಾದಯಾತ್ರೆಗಳಿಗೆ ಅನುಮತಿ ನೀಡಬಾರದು. ತಕ್ಷಣ ಆದೇಶ ಪಾಲನೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ತಿಳಿಸಿದೆ.