ನವದೆಹಲಿ, ಮಾ 03 (DaijiworldNews/DB): ಉಕ್ರೇನ್ನಿಂದ ಭಾರತಕ್ಕೆ ಮರಳಿದ ಭಾರತೀಯ ವಿದ್ಯಾರ್ಥಿಗಳಿಗೆ ಆಪರೇಷನ್ ಗಂಗಾ ಕಾರ್ಯಾಚರಣೆ ಅಡಿಯಲ್ಲಿ ನೆರವಾಗಲು ರೈಲ್ವೆ ಇಲಾಖೆಯು ವಿಶೇಷ ಸೌಲಭ್ಯ ಕಲ್ಪಿಸಿದೆ. ವಿಮಾನ ನಿಲ್ದಾಣದಲ್ಲಿಯೇ ರೈಲು ಕಾಯ್ದಿರಿಸುವುದರೊಂದಿಗೆ ಉಚಿತ ಟಿಕೆಟ್ ವ್ಯವಸ್ಥೆಯನ್ನೂ ಮಾಡಿದೆ.
ಉತ್ತರ ರೈಲ್ವೆಯು ಉಕ್ರೇನ್ ನಿಂದ ಭಾರತಕ್ಕೆ ಮರಳಿರುವ ವಿದ್ಯಾರ್ಥಿಗಳಿಗೆ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಟರ್ಮಿನಲ್-3 ರಲ್ಲಿ ವಿಶೇಷ ರೈಲು ಕಾಯ್ದಿರಿಸುವಿಕೆ ಕೌಂಟರ್ ಸ್ಥಾಪಿಸಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿದ್ಯಾರ್ಥಿಗಳು ನೇರವಾಗಿ ದೃಢೀಕರಿಸಿದ ಟಿಕೆಟ್ ಗಳನ್ನು ಅಲ್ಲಿ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.
ಅಲ್ಲದೆ, ಉತ್ತರ ಮತ್ತು ಪಶ್ಚಿಮ ಮಧ್ಯ ರೈಲ್ವೆಗಳು ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಟರ್ಮಿನಲ್-3 ಮತ್ತು ಮುಂಬೈ ವಿಮಾನ ನಿಲ್ದಾಣದಲ್ಲಿ ವಿಶೇಷ ರೈಲು ಕಾಯ್ದಿರಿಸುವಿಕೆ ಕೌಂಟರ್ ಗಳನ್ನು ಸ್ಥಾಪಿಸಿವೆ. ಈ ಕೌಂಟರ್ ಗಳಲ್ಲಿ ಟಿಕೆಟ್ ಪಡೆದು ಉಕ್ರೇನ್ ನಿಂದ ವಾಪಸ್ಸಾದ ಪ್ರಯಾಣಿಕರು ತಮ್ಮ ತಮ್ಮ ರಾಜ್ಯಗಳಿಗೆ ಪ್ರಯಾಣಿಸಲು ಅವಕಾಶವಿದೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ವಿದ್ಯಾರ್ಥಿಗಳಿಗೆ ದೃಢೀಕೃತ ಟಿಕೆಟ್ ಗಳು ಈ ಕೌಂಟರ್ ಗಳಲ್ಲಿ ಲಭ್ಯವಿರುತ್ತವೆ.
ಕೆಎಸ್ಸಾರ್ಟಿಸಿಯಿಂದ ಉಚಿತ ಪ್ರಯಾಣ
ವಿಮಾನ ಮೂಲಕ ಕರ್ನಾಟಕಕ್ಕೆ ಬಂದಿಳಿದ ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ಕರೆದೊಯ್ಯಲು ಕೆಎಸ್ಸಾರ್ಟಿಸಿಯು ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಕರ್ನಾಟಕ ರಾಜ್ಯ ವಿಮಾನ ನಿಲ್ದಾಣದೊಳಗಿನ ಎಲ್ಲಾ ನೋಡಲ್ ಅಧಿಕಾರಿಗಳು ಮತ್ತು ರಸ್ತೆ ಸಾರಿಗೆ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯ ಸಾಧಿಸಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕು ಎಂಬುದಾಗಿ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.