ನವದೆಹಲಿ, ಮಾ 03 (DaijiworldNews/DB): ಉಕ್ರೇನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ ಎಂಬ ರಷ್ಯಾದ ಹೇಳಿಕೆಯನ್ನು ಗುರುವಾರ ನಿರಾಕರಿಸಿರುವ ಭಾರತ, ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲು ನೆರವಾಗುತ್ತಿರುವ ಉಕ್ರೇನ್ ಗೆ ಅಭಿನಂದನೆ ಸಲ್ಲಿಸಿದೆ.
ಭಾರತದ ವಿದ್ಯಾರ್ಥಿಗಳನ್ನು ಉಕ್ರೇನ್ ಭದ್ರತಾ ಪಡೆಗಳು ಮಾನವ ಗುರಾಣಿಗಳನ್ನಾಗಿ ಬಳಸುತ್ತಿವೆ. ರಷ್ಯಾದ ಕಡೆ ವಿದ್ಯಾರ್ಥಿಗಳು ಬರುವುದನ್ನು ತಡೆಯಲಾಗುತ್ತಿದೆ. ರಷ್ಯಾ ಭಾರತದ ವಿದ್ಯಾರ್ಥಿಗಳನ್ನು ಮಾನವೀಯ ನೆಲೆಯಲ್ಲಿ ಸ್ಥಳಾಂತರ ಮಾಡಲು ಪ್ರಯತ್ನಿಸುತ್ತಿದೆ ಎಂಬುದಾಗಿ ರಷ್ಯಾ ಸರಕಾರ ಬುಧವಾರ ಹೇಳಿತ್ತು.
ರಷ್ಯಾದ ಈ ಹೇಳಿಕೆ ಬೆನ್ನಲ್ಲೇ ಗುರುವಾರ ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಭಾರತದ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿರಿಸಿಕೊಂಡಿರುವ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಉಕ್ರೇನ್ ಅಧಿಕಾರಿಗಳ ಸಹಕಾರದಿಂದಾಗಿ ಭಾರತದ ಹಲವು ವಿದ್ಯಾರ್ಥಿಗಳು ಖಾರ್ಕಿವ್ ತೊರೆದಿದ್ದಾರೆ ಎಂದಿದ್ದಾರೆ.
ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ ಎಂಬ ರಷ್ಯಾ ಅರೋಪವನ್ನು ಉಕ್ರೇನ್ ಕೂಡಾ ನಿರಾಕರಿಸಿದೆ.