ಅಂಕೋಲ, ಮಾ 03 (DaijiworldNews/DB): ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ತಾಲೂಕಿನ ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ನಿಲ್ದಾಣ ಹಿಂಬದಿಯಲ್ಲಿರುವ ಶೌಚಾಲಯದ ಒಳಗಡೆ ತೆರಳಿ ಬಾಗಿಲು ಚಿಲಕ ಹಾಕಿಕೊಂಡು ಮಲಗಿರುವ ಘಟನೆ ಅಂಕೋಲದಲ್ಲಿ ನಡೆದಿದೆ. ಆತನನ್ನು ವಿಚಾರಿಸಿದಾಗ ಆತ ಮಂಗಳೂರು ಮೂಲದವನೆಂದು ತಿಳಿದು ಬಂದಿದೆ.
ನೂತನವಾಗಿ ನಿರ್ಮಾಣಗೊಂಡಿರುವ ಶೌಚಾಲಯ ಇದಾಗಿದೆ. ಒಳಗಡೆ ತೆರಳಿದ ವ್ಯಕ್ತಿ ಸುಮಾರು ಒಂದು ತಾಸು ಕಳೆದರೂ ಹೊರ ಬಾರದ ಹಿನ್ನೆಲೆಯಲ್ಲಿ ಶೌಚಾಲಯ ಸಿಬಂದಿ ಬಾಗಿಲು ತಟ್ಟಿದ್ದಾರೆ. ಆದರೆ ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಶೌಚಾಲಯದೊಳಗಿರುವ ಸಣ್ಣ ಕಿಂಡಿಯೊಳಗಿಂದ ಮೊಬೈಲ್ ಮೂಲಕ ಚಿತ್ರೀಕರಣ ಮಾಡಿದಾಗ ವ್ಯಕ್ತಿಯ ಮಲಗಿದ್ದ ರೀತಿಯಲ್ಲಿ ಕಂಡು ಬಂದಿದ್ದ. ಸಿಬಂದಿ ಕೂಡಲೇ ಕೆಎಸ್ಸಾರ್ಟಿಸಿ ನಿಯಂತ್ರಕರ ಗಮನಕ್ಕೆ ತಂದಿದ್ದಾನೆ. ಸ್ಥಳಕ್ಕೆ ಆಗಮಿಸಿದ ಇತರ ಸಿಬಂದಿ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅಂಕೋಲ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು.
ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲಿನ ಶೀಟ್ ಬಿರುಕು ಬಿಟ್ಟ ಭಾಗದಿಂದ ಒಳಗಡೆ ಇಣುಕಿ ನೋಡಿದಾಗ ಆತ ಮಲಗಿದ್ದ ಸ್ಥಿತಿಯಲ್ಲಿರುವುದನ್ನು ಕಂಡು ಆತ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ಬಳಿಕ ಬಾಗಿಲು ತೆರೆದು ಆತನನ್ನು ಮುಟ್ಟಿ ನೋಡಿದಾಗ ಆತ ಉಸಿರಾಡುತ್ತಿದ್ದು, ಅಸ್ವಸ್ಥನಾದವನಂತೆ ಎದ್ದು ಕುಳಿತುಕೊಂಡ. ಆತನನ್ನು ವಿಚಾರಣೆ ನಡೆಸಿದಾಗ ಮಂಗಳೂರಿನ ಕಾಪು ಮೂಲದವನಾಗಿದ್ದು, ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ರಸ್ತೆಯಲ್ಲಿರುವ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕುಡಿತದ ಚಟದಿಂದ ಬೇಸತ್ತ ಮಾಲಕರು ಆತನನ್ನು ಕೆಲಸದಿಂದ ತೆಗೆದಿದ್ದರು ಎಂಬ ಮಾಹಿತಿ ಲಭಿಸಿತ್ತು. ಬಳಿಕ ಅತನನ್ನು ಬಸ್ ಹತ್ತಿಸಿ ಊರಿಗೆ ಕಳುಹಿಸಿಕೊಡಲಾಯಿತು ಎಂದು ತಿಳಿದು ಬಂದಿದೆ.