ನವದೆಹಲಿ, ಮಾ 03 (DaijiworldNews/DB): ಉತ್ತರ ಪ್ರದೇಶದಲ್ಲಿಂದು 6ನೇ ಹಂತದ ಮತದಾನ ನಡೆಯುತ್ತಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎಸ್ ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಚುನಾವಣಾ ಕಣದಲ್ಲಿದ್ದಾರೆ.
ಗೋರಖ್ಪುರದ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದ ಯೋಗಿ ಆದಿತ್ಯನಾಥ್ ವಿಧಾನಸಭೆ ಚುನಾವಣೆ ಎದುರಿಸುತ್ತಿರುವುದು ಇದೇ ಮೊದಲು. ಯೋಗಿ ಅಯೋಧ್ಯೆಯಿಂದ ಸ್ಪರ್ಧಿಸುವುದಾಗಿ ಈ ಹಿಂದೆ ಹೇಳಲಾಗಿತ್ತಾದರೂ, ಅನಂತರದ ಬೆಳವಣಿಗೆಯಲ್ಲಿ ಅವರು ತಮ್ಮ ತವರು ಜಿಲ್ಲೆ ಗೋರಖ್ ಪುರ ವಿಧಾನಸಭಾ ಕ್ಷೇತ್ರದಿಂದಲೇ ಟಿಕೆಟ್ ಪಡೆದಿದ್ದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ 676 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯೋಗಿ ಸಂಪುಟದಲ್ಲಿ ಸಚಿವರಾಗಿದ್ದು ಬಳಿಕ ಬಿಜೆಪಿ ತೊರೆದು ಇತ್ತೀಚಿಗೆ ಸಮಾಜವಾದಿ ಪಕ್ಷಕ್ಕೆ ಸೇರಿದ ಸ್ವಾಮಿ ಪ್ರಸಾದ್ ಮೌರ್ಯ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೆದುರು ಸ್ಪರ್ಧಿಸಿರುವುದರಿಂದ ಚುನಾವಣೆ ಹೆಚ್ಚಿನ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ನ ಅಜಯ್ ಕುಮಾರ್ ಲಲ್ಲು ಅವರು ಕೂಡಾ ಕಣದಲ್ಲಿದ್ದಾರೆ.
ಅಂಬೇಡ್ಕರ್ನಗರ, ಬಲರಾಂಪುರ, ಸಿದ್ಧಾರ್ಥನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜಗಂಜ್, ಗೋರಖ್ಪುರ, ಕುಶಿನಗರ, ಡಿಯೋರಿಯಾ ಮತ್ತು ಬಲ್ಲಿಯಾ ಜಿಲ್ಲೆಗಳ 57 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಈ ಪೈಕಿ 11 ಕ್ಷೇತ್ರಗಳು ಬಿಜೆಪಿ ಪಾಲಿಗೆ ನಿರ್ಣಾಯಕವಾಗಿವೆ. 2017ರಲ್ಲಿ ಬಿಜೆಪಿ ಈ 57 ಕ್ಷೇತ್ರಗಳ ಪೈಕಿ 46 ಕ್ಷೇತ್ರಗಳಲ್ಲಿ ಗೆದ್ದಿತ್ತು.
ಚುನಾವಣೆ ಅರಂಭವಾಗುವುದಕ್ಕೂ ಮುನ್ನ ಮಾತನಾಡಿದ ಯೋಗಿ ಆದಿತ್ಯನಾಥ್, ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತ ಹಾಕುತ್ತಾರೆ ಎಂಬ ನಂಬಿಕೆ ಇದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಡಿ ಬಿಜೆಪಿ ಅತ್ಯಂತ ಹೆಚ್ಚಿನ ಸೀಟುಗಳನ್ನು ಗೆಲ್ಲಲಿದೆ. ಬಿಜೆಪಿಗೆ ಶೇ. 80ರಷ್ಟು ಕ್ಷೇತ್ರದ ಗೆಲುವು ಸಾಧ್ಯವಾಗಲಿದೆ. ಬಿಜೆಪಿಗೆ ನೀಡುವ ಮತ ಅಭಿವೃದ್ಧಿ ಮತ್ತು ಭದ್ರತೆಗೆ ನೀಡುವ ಮತವಾಗಿದೆ ಎಂಬುದು ಜನರಿಗೂ ಗೊತ್ತಿದೆ ಎಂದು ತಿಳಿಸಿದರು.