ನವದೆಹಲಿ, ಮಾ 02 (DaijiworldNews/DB): ಯುದ್ದಗ್ರಸ್ಥ ಉಕ್ರೇನ್ ನಲ್ಲಿ ಭಾರತೀಯ ಮೂಲದ ಇನ್ನೊಬ್ಬ ವೈದ್ಯಕೀಯ ವಿದ್ಯಾರ್ಥಿ ಬುಧವಾರ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದ್ದು, ಎರಡು ದಿನಗಳ ಅಂತರದಲ್ಲಿ ಸಾವನ್ನಪ್ಪಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಎರಡಕ್ಕೇರಿದೆ.
ಪಂಜಾಬ್ ಮೂಲದ ಚಂದನ್ ಜಿಂದಾಲ್ (22) ಸಾವನ್ನಪ್ಪಿರುವ ವಿದ್ಯಾರ್ಥಿ. ಮೃತ ವಿದ್ಯಾರ್ಥಿ ಇಸ್ಕೆಮಿಕ್ ಸ್ಟ್ರೋಕ್ ನಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಅವರನ್ನು ವಿನ್ನಿಟ್ಸಿಯಾ ತುರ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಚಂದನ್ ಮೃತದೇಹವನ್ನು ಭಾರತಕ್ಕೆ ತರಲು ಸೂಕ್ತ ವ್ಯವಸ್ಥೆ ಮಾಡುವಂತೆ ಅವರ ತಂದೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಮಂಗಳವಾರ ಖಾರ್ಕಿವ್ ನಲ್ಲಿ ನಡೆದ ಶೆಲ್ ದಾಳಿಯಲ್ಲಿ ಉಕ್ರೇನ್ ನಲ್ಲಿ ಕಲಿಯುತ್ತಿದ್ದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದರು. ನವೀನ್ ಶವವನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.