ಬೆಂಗಳೂರು, ಮಾ 01 (DaijiworldNews/MS):ಉಕ್ರೇನ್ನಲ್ಲಿ ಸಾವನ್ನಪ್ಪಿದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ತಂದೆ ಶೇಖರಗೌಡ ಅವರಿಗೆ ದೂರವಾಣಿ ಕರೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದ್ದಾರೆ.
ನವೀನ್ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿ ಶೋಕ ಮಡುಗಟ್ಟಿದ್ದು, ಮಗನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ನವೀನ್ ಸಾವಿನ ಕುರಿತು ವಿಷಾದ ವ್ಯಕ್ತಪಡಿಸಿ ಮಾತನಾಡಿದ ಸಿಎಂ, "ಇದು ನಿಜಕ್ಕೂ ದೊಡ್ಡ ದುರಂತ ದೇವರು ನವೀನ್ ಆತ್ಮಕ್ಕೆ ಶಾಂತಿ ನೀಡಲಿ. ನೀವು ಧೈರ್ಯದಿಂದಿರಿ. ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿದೆ. ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ" ಎಂದು ಸಮಾಧಾನಿಸಿದ್ದಾರೆ.
ಮಗನ ಬಗ್ಗೆ ದುಃಖದಿಂದ ಮಾತನಾಡಿದ ಶೇಖರಗೌಡ ಗ್ಯಾನ ಗೌಡರ್, ಕಳೆದ ಮೂರು ತಿಂಗಳ ಹಿಂದೆ ಅಷ್ಟೇ ಊರಿಗೆ ಬಂದು ಹೋಗಿದ್ದ. ಉಕ್ರೇನ್ನಲ್ಲಿ ಯುದ್ಧ ಆರಂಭವಾದಾಗಿನಿಂದ ಮಗ ಸುರಕ್ಷಿತವಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದೇವು. ಬೆಳಿಗ್ಗೆ ಮಗ ದೂರವಾಣಿ ಕರೆ ಮಾಡಿದ್ದ. ಪ್ರತಿ ದಿನ ಎರಡು ಮೂರು ಬಾರಿ ದೂರವಾಣಿ ಮಾಡಿ ಮಾತನಾಡುತ್ತಿದ್ದ' ಎಂದು ವಿವರಿಸಿದ್ದಾರೆ.