ನವದೆಹಲಿ, ಮಾ 01 (DaijiworldNews/DB): ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕರ ಅಧಿಕಾರಿ (ಸಿಇಒ) ಆಗಿ ಅಧಿಕಾರ ಸ್ವೀಕರಿಸಲು ಟಾಟಾ ಗ್ರೂಪ್ ನೀಡಿದ್ದ ಅವಕಾಶವನ್ನು ಟರ್ಕಿಷ್ ಏರ್ಲೈನ್ಸ್ನ ಮಾಜಿ ಅಧ್ಯಕ್ಷ ಇಲ್ಕರ್ ಆಯ್ಚಿ ಮಂಗಳವಾರ ತಿರಸ್ಕರಿಸಿದ್ದಾರೆ.
ಏರ್ ಇಂಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಇಲ್ಕರ್ ಆಯ್ಚಿ ಅವರನ್ನು ನೇಮಕ ಮಾಡಿರುವುದಾಗಿ ಟಾಟಾ ಗ್ರೂಪ್ ಫೆ14ರಂದು ಪ್ರಕಟಿಸಿತ್ತು.ಆದರೆ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಇಲ್ಕರ್ ಆಯ್ಚಿಅವರನ್ನು ಆಯ್ಕೆ ಮಾಡಲು ಸರ್ಕಾರ ಅನುಮತಿ ನೀಡಬಾರದು ಎಂದು ಕಳೆದ ಶುಕ್ರವಾರ ಆರ್ಎಸ್ಎಸ್ ಅಂಗ ಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ ಒತ್ತಾಯಿಸಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಭಾರತ ಸರ್ಕಾರವು ಜ 27ರಂದು ಏರ್ ಇಂಡಿಯಾ ಮಾಲೀಕತ್ವವನ್ನು ಟಾಟಾ ಸನ್ಸ್ಗೆ ಹಸ್ತಾಂತರಿಸಿತ್ತು. ಏರ್ ಇಂಡಿಯಾ ಉಳಿಸಿಕೊಂಡಿದ್ದ15,300 ಕೋಟಿ ರೂ. ಸಾಲದ ಮೊತ್ತ ಮತ್ತು 2,700 ಕೋಟಿ ರೂ. ನಗದು ಸೇರಿ ಒಟ್ಟು 18,000 ಕೋಟಿ ರೂ.ಗಳಿಗೆ ಟಾಟಾ ಸನ್ಸ್ ಬಿಡ್ ಸಲ್ಲಿಸಿತ್ತು.
ಟರ್ಕಿಷ್ ಏರ್ಲೈನ್ಸ್ನ ಅಧ್ಯಕ್ಷರಾಗಿದ್ದ ಇಲ್ಕರ್ ಆಯ್ಚಿ ಏ 1 ಅಥವಾ ಅದಕ್ಕೂ ಮುಂಚೆಯೇ ಏರ್ ಇಂಡಿಯಾದ ಹೊಣೆಗಾರಿಕೆ ವಹಿಸಲಿದ್ದಾರೆ ಎಂದು ಟಾಟಾ ಗ್ರೂಪ್ ಪ್ರಕಟನೆಯಲ್ಲಿ ತಿಳಿಸಿತ್ತು.