ಬೆಂಗಳೂರು, ಮಾ 01 (DaijiworldNews/DB): ಮೇಕೆದಾಟು ಪಾದಯಾತ್ರೆ 2.0 ಪರಿಣಾಮ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಗರದ ಜನತೆಯ ಕ್ಷಮೆ ಯಾಚಿಸಿದ್ದಾರೆ.
ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್'ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ನಾವು ರಾಜ್ಯದ ಜನರ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಇಂದಿನಿಂದ ಬೆಂಗಳೂರಿನಲ್ಲಿ ಮೂರು ದಿನ ಪಾದಯಾತ್ರೆ ಮಾಡುತ್ತಿದ್ದೇವೆ. ಮೊದಲನೇ ಹಂತದ ಪಾದಯಾತ್ರೆಗೆ ಜನರು ಸಹಕಾರ ನೀಡಿದ್ದರು. ಉಕ್ರೇನ್-ರಷ್ಯಾ ಯುದ್ಧದ ವಿಷಯ ಇಲ್ಲದಿರುತ್ತಿದ್ದರೆ ಮಾಧ್ಯಮದವರು ಕೂಡ ಪಾದಯಾತ್ರೆಗೆ ಹೆಚ್ಚು ಪ್ರಚಾರ ನೀಡುತ್ತಿದ್ದರು ಎಂದರು.
ಪಾದಯಾತ್ರೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕಾಗಿ ನಾನು ಜನತೆಯಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಆದರೆ ಜನರ ಭವಿಷ್ಯದ ಹಿತದೃಷ್ಟಿಯಿಂದ ಈ ಹೋರಾಟ ನಡೆಯುತ್ತಿದೆ. ಮೂರು ದಿನದ ಟ್ರಾಫಿಕ್ ಜಾಮ್ ಸಹಿಸಿಕೊಂಡರೆಕುಡಿಯುವ ನೀರಿನ ಸಮಸ್ಯೆ ಇರಲ್ಲ. ಜನರು ನಮಗೆ ಸಹಕಾರ ಕೊಡಬೇಕು ಎಂದವರು ವಿನಂತಿಸಿದರು.
ಕುಡಿಯುವ ನೀರಿನ ಯೋಜನೆಗೆ ಯಾರ ಅನುಮತಿ ಬೇಕಾಗಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅದರೆ ಸಚಿವ ಗೋವಿಂದ ಕಾರಜೋಳ ಅವರಿಗೆ ಇದು ಗೊತ್ತಿಲ್ವಾ ಎಂದು ಪ್ರಶ್ನಿಸಿದ ಆವರು, ನಾನು ಕೂಡ ಕೆಲ ತಿಂಗಳು ಜಲಸಂಪನ್ಮೂಲ ಸಚಿವನಾಗಿದ್ದೆ. ಎನ್ಓಸಿ ಬೇಕಾಗಿಲ್ಲವಾದರೂ ಈ ಬಗ್ಗೆಸುಮ್ಮನೇ ಮಾತನಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಎಲ್ಲರಿಗೂ ಇರುವುದು ಒಂದೇ ಕಾನೂನು. ನಮ್ಮ ಪಕ್ಷದ ಪ್ರಚಾರದ ಬ್ಯಾನರ್ ಗಳನ್ನ ರಾತ್ರೋರಾತ್ರಿ ತೆಗಸಲಾಗುತ್ತಿದೆ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಹುಟ್ಟು ಹಬ್ಬ, ಡಿಸಿಎಂ ಅಶ್ವತ್ ನಾರಾಯಣ್ ಹುಟ್ಟುಹಬ್ಬ, ಸೋಮಣ್ಣ ಹುಟ್ಟು ಹಬ್ಬ, ಶಿವರಾತ್ರಿ ಹಬ್ಬದ ಬೋರ್ಡ್ ಹಾಕಿದ್ದಾರೆ. ಇದು ಯಾವ ನ್ಯಾಯ ಎಂದವರು ಪ್ರಶ್ನಿಸಿದರು. ಬಿಬಿಎಂಪಿ ಆಯುಕ್ತರು ಬಿಬಿಎಂಪಿ ಕಚೇರಿ ಹೆಸರಿನ ಬದಲು ಬಿಜೆಪಿ ಪಾರ್ಟಿ ಅಂತ ಬೋರ್ಡ್ ಹಾಕಿಕೊಳ್ಳಲಿ ಎಂದು ಡಿ.ಕೆ ಶಿವಕುಮಾರ್ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ಪೋಲಿಸರು ಸಮವಸ್ತ್ರ ತೆಗೆದಿಟ್ಟು ಬಿಜೆಪಿ ವಸ್ತ್ರವನ್ನು ತೊಟ್ಟುಕೊಳ್ಳಲಿ. ಶಿವಮೊಗ್ಗದಲ್ಲಿ ಕೆಲವು ಪೋಲಿಸ್ ಅಧಿಕಾರಿಗಳು ಏನೇನು ಮಾಡುತ್ತಿದ್ದಾರೆ ಎಂಬ ಬಗ್ಗೆ ಎಲ್ಲಾ ಮಾಹಿತಿ ನನ್ನ ಬಳಿ ಇದೆ. ಯಾರಿಗೂ ಅಧಿಕಾರ ಶಾಶ್ವತ ಅಲ್ಲ ಎಂಬುದು ನೆನಪಿರಬೇಕು ಎಂದು ಇದೇ ವೇಳೆ ಆವರು ಪೋಲಿಸರ ವಿರುದ್ಧ ಹರಿಹಾಯ್ದರು.
ಶಿವಮೊಗ್ಗದಲ್ಲಿ144 ಸೆಕ್ಷನ್ ಇದ್ದರೂ ಸಚಿವ ಕೆ.ಎಸ್. ಈಶ್ವರಪ್ಪ, ಅಲ್ಲಿನ ಸಂಸದರು ಶಿವಮೊಗ್ಗದಲ್ಲಿ ರ್ಯಾಲಿ ಮಾಡುತ್ತಾರೆ. ಅಲ್ಲಿ ನಡೆದ ಗಲಾಟೆಗೆ ಅವರೇ ಕಾರಣ. ಆದರೆ ಆವರ ಮೇಲೆ ಇನ್ನೂ ಯಾವುದೇ ದೂರು ದಾಖಲಾಗಿಲ್ಲ ಎಂದರು. ಹರ್ಷ ನಮ್ಮ ಹುಡುಗ. ಪಾದಯಾತ್ರೆ ಮುಗಿದ ನಂತರ ಹರ್ಷ ಮನೆಗೆ ಭೇಟಿ ನೀಡುತ್ತೇನೆ ಎಂದು ಡಿ. ಕೆ. ಶಿವಕುಮಾರ್ ಇದೇ ವೇಳೆ ತಿಳಿಸಿದರು.