ನವದೆಹಲಿ, ಮಾ 01 (DaijiworldNews/MS): ರಷ್ಯಾ ಆಕ್ರಮಿತ ಉಕ್ರೇನ್ನಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ನಡೆಸಲಾಗುತ್ತಿರುವ ಕಾರ್ಯಾಚರಣೆಗೆ ಕೈಜೋಡಿಸುವಂತೆ ಭಾರತೀಯ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ನಮ್ಮ ವಾಯುಪಡೆಯ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಕಡಿಮೆ ಸಮಯದ ಚೌಕಟ್ಟಿನಲ್ಲಿ ಹೆಚ್ಚಿನ ಜನರನ್ನು ಸ್ಥಳಾಂತರಿಸಬಹುದು. ಇದು ಮಾನವೀಯ ಸಹಾಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಹಕಾರಿಯಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ
ಯುದ್ದಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಮತ್ತು ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರವು 'ಆಪರೇಷನ್ ಗಂಗಾ' ಪ್ರಾರಂಭಿಸಿದೆ. 'ಆಪರೇಷನ್ ಗಂಗಾ' ಮಿಷನ್ನ ಭಾಗವಾಗಿ ಏರ್ ಇಂಡಿಯಾ ವಿಶೇಷ ವಿಮಾನಗಳನ್ನು ನಿರ್ವಹಿಸುತ್ತಿದೆ.. ಉಕ್ರೇನ್ನಲ್ಲಿರುವ ಭಾರತೀಯರನ್ನು ನೆರೆ ದೇಶಗಳಾದ ಪೋಲೆಂಡ್, ರುಮೇನಿಯಾ, ಸ್ಲೊವಾಕಿಯಾ, ಹಂಗೆರಿ ಮೂಲಕ ಸ್ವದೇಶಕ್ಕೆ ಕರೆತರಲಾಗುತ್ತಿದೆ. ಈವರೆಗೆ 7 ವಿಮಾನಗಳ ಮೂಲಕ ಭಾರತೀಯರನ್ನು ಕರೆದುಕೊಂಡು ಬರಲಾಗಿದೆ.
ಉಕ್ರೇನ್ನಲ್ಲಿ ಸಿಲುಕಿರುವವರನ್ನು ಕರೆತರುವುದಕ್ಕಾಗಿ ಭಾರತದ ದೇಶೀಯ ವಿಮಾನಯಾನ ಸಂಸ್ಥೆಗಳು ರುಮೇನಿಯಾ, ಹಂಗೆರಿಗೆ ವಿಮಾನಗಳನ್ನು ಕಳುಹಿಸುತ್ತಿವೆ. ಸ್ಪೈಸ್ಜೆಟ್, ಇಂಡಿಗೊ, ಏರ್ ಇಂಡಿಯಾ ಎಕ್ಸ್ಪ್ರೆಸ್ಗಳು ರುಮೇನಿಯಾ, ಹಂಗೆರಿಗಳಿಗೆ ವಿಶೇಷ ವಿಮಾನಗಳನ್ನು ಕಳುಹಿಸಲಿವೆ. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ರುಮೇನಿಯಾದ ಬುಕಾರೆಸ್ಟ್ ಹಾಗೂ ಹಂಗೆರಿಯ ಬುಡಾಪೆಸ್ಟ್ಗಳಿಂದ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿವೆ
ಭಾರತೀಯ ವಾಯುಪಡೆಯು ಇಂದಿನಿಂದ 'ಆಪರೇಷನ್ ಗಂಗಾ' ಭಾಗವಾಗಿ ಹಲವಾರು C-17 ವಿಮಾನಗಳನ್ನು ನಿಯೋಜಿಸುವ ಸಾಧ್ಯತೆಯಿದೆ.