ನವದೆಹಲಿ, ಮಾ 01 (DaijiworldNews/HR): ಭಾರತೀಯರ ರಕ್ಷಣೆಗೆ ಉಕ್ರೇನ್'ನಿಂದ 9ನೇ ವಿಮಾನವು ಭಾರತದತ್ತ ಬಂದಿದ್ದು, ನಮ್ಮ ಭಾರತೀಯರು ಸುರಕ್ಷಿತವಾಗುವ ತನಕ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಉಕ್ರೇನ್ನಿಂದ ಭಾರತೀಯರನ್ನು ತಾಯ್ನಾಡಿಗೆ ಮರಳಿ ತರುವ ಕಾರ್ಯಕ್ಕೆ ಆಪರೇಷನ್ ಗಂಗಾ ಎಂದು ಹೆಸರಿಡಲಾಗಿದ್ದು, ಉಕ್ರೇನ್ನಿಂದ ಸ್ಥಳಾಂತರಿಸಲಾದ 182 ಭಾರತೀಯ ಪ್ರಜೆಗಳನ್ನು ಹೊತ್ತ ಏಳನೇ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಇಂದು ಬೆಳಗ್ಗೆ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ನಿಂದ ಮುಂಬೈಗೆ ಬಂದಿಳಿದಿದೆ ಎಂದರು.
ಇನ್ನು ಉಕ್ರೇನ್ನ ನಗರಗಳಲ್ಲಿ ಹಾಗೂ ಗಡಿ ಭಾಗಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಭಾರತವು ಮತ್ತಷ್ಟು ಚುರುಕು ಮುಟ್ಟಿಸಿದ್ದು, ಇಂದು ರೋಮೆನಿಯಾದ ರಾಜಧಾನಿ ಬುಕಾರೆಸ್ಟ್ನಿಂದ ಎರಡು ವಿಮಾನಗಳು ಹಾಗೂ ಹಂಗೇರಿಯ ರಾಜಧಾನಿ ಬುಡಾಪೆಸ್ಟ್ನಿಂದ ಒಂದು ವಿಮಾನವು ಹೊರಟು ಮುಂಬೈ ಹಾಗೂ ದೆಹಲಿ ವಿಮಾನ ನಿಲ್ದಾಣಗಳಿಗೆ ಬಂದಿಳಿಯಲಿವೆ ಎಂದು ಮಾಹಿತಿ ನೀಡಿದ್ದಾರೆ.