ನವದೆಹಲಿ, ಮಾ 01 (DaijiworldNews/MS): ಉಕ್ರೇನ್ ರಾಷ್ಟ್ರದ ಹದಗೆಟ್ಟ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ವಿಷಾದ ವ್ಯಕ್ತಪಡಿಸುವ ಮೂಲಕ ಹಾಗೂ ಮೌನವಾಗಿ ಉಳಿಯುವ ಮೂಲಕ ಮತ್ತೊಮ್ಮೆ ರಷ್ಯಾಕ್ಕೆ ಸಂದೇಶ ರವಾನಿಸಿದೆ. ಮಾತ್ರವಲ್ಲದೆ ಉಕ್ರೇನ್ನಲ್ಲಿನ ಹಿಂಸಾಚಾರ ಮತ್ತು ಬಿಕ್ಕಟ್ಟಿನ ಬಗ್ಗೆ ಮರುಕ ವ್ಯಕ್ತಪಡಿಸಿದ ಭಾರತ ಉಕ್ರೇನ್ನ ಕೋರಿಕೆಯ ಮೇರೆಗೆ ಭಾರತವು ಕೈವ್ಗೆ ಮಾನವೀಯ ನೆರವು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಲು ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದು, ಯುದ್ಧಪೀಡಿತ ಉಕ್ರೇನ್ಗೆ ಮೊದಲ ಹಂತದ ಪರಿಹಾರ ಸಾಮಗ್ರಿಗಳನ್ನು ಮಾ. 01 ರ ಮಂಗಳವಾರ ಸಂಜೆಯೊಳಗೇ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ.
ಇದಲ್ಲದೆ ನಿನ್ನೆ ರಾತ್ರಿ ಉಕ್ರೇನ್ ನೆರೆರಾಷ್ಟ್ರಗಳಿಗೆ ತೆರಳಿರುವ ನಾಲ್ವರು ಕೇಂದ್ರ ಸಚಿವರು ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನಗಳಿಗೆ ನೆರವು ನೀಡಲಿದ್ದಾರೆ. ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ ವಿಕೆ ಸಿಂಗ್ ಅವರು ಹಂಗೇರಿ, ರೊಮೇನಿಯಾ, ಮೊಲ್ಡೊವಾ, ಸ್ಲೊವೇನಿಯಾ ಮತ್ತು ಪೋಲೆಂಡ್ನಿಂದ ಸ್ಥಳಾಂತರಿಸುವ ಪ್ರಯತ್ನಗಳನ್ನು ತ್ವರಿತಗೊಳಿಸಲಿದ್ದಾರೆ.
ಇನ್ನೊಂದೆಡೆ ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವಿಶೇಷ ತುರ್ತು ಅಧಿವೇಶನ ಕರೆಯುವ ನಿರ್ಣಯ ಮೇಲಿನ ಮತದಾನದಿಂದ ಭಾರತ ದೂರ ಉಳಿದಿದ್ದರೂ ಕೂಡಾ, ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಯುದ್ಧವನ್ನು ಕೊನೆಗೊಳಿಸಬೇಕು ಎಂದು ಭಾರತ ನಿಲುವು ವ್ಯಕ್ತಪಡಿಸಿದ್ದು, ಸೇನಾ ಕಾರ್ಯಾಚರಣೆಯನ್ನು ರಷ್ಯಾ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.