ನವದೆಹಲಿ, ಫೆ 28 (DaijiworldNews/MS): ಭಾರತದ ಭದ್ರತೆ ಮತ್ತು ವಿನಿಮಯ ಮಂಡಳಿ (ಸೆಬಿ) ಮುಖ್ಯಸ್ಥರಾಗಿ ಮೂರು ವರ್ಷದ ಅವಧಿಗೆ ಮಾಧಬಿ ಪುರಿ ಬುಚ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಬುಚ್ ಸೆಬಿಯ ಮಾಜಿ ಪೂರ್ಣವಧಿಯ ಸದಸ್ಯರಾಗಿದ್ದಾರೆ. ಮಾರುಕಟ್ಟೆ ನಿಯಂತ್ರಕ ಮುಖ್ಯಸ್ಥರಾಗಿರುವ ಮೊದಲ ಮಹಿಳೆ ಇವರಾಗಿದ್ದಾರೆ.
ಸೆಬಿ ಮುಖ್ಯಸ್ಥರಾಗಿದ್ದ ಅಜಯ್ ತ್ಯಾಗಿ ಅವರ ಅಧಿಕಾರವಧಿ ಇಂದಿಗೆ ಕೊನೆಯಾಗಿದೆ. ಸೆಬಿಗೆ ಹೊಸ ಅಧ್ಯಕ್ಷರು ಸಿಗುತ್ತಾರೆಯೇ ಅಥವಾ ಪ್ರಸ್ತುತ ಅಧ್ಯಕ್ಷರಾದ ಅಜಯ್ ತ್ಯಾಗಿ ಮತ್ತೊಂದು ವಿಸ್ತರಣೆಯನ್ನು ಪಡೆಯುತ್ತಾರೆಯೇ ಎಂಬುದರ ಕುರಿತು ಷೇರು ಮಾರುಕಟ್ಟೆ ಸ್ಪಷ್ಟತೆಗಾಗಿ ಕಾಯುತ್ತಿತ್ತು. ಆದರೆ ಇದೀಗ ಮೊದಲ ಬಾರಿಗೆ ಮಹಿಳೆಯೊಬ್ಬರು ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯ ಮುಖ್ಯಸ್ಥೆಯಾಗಲಿದ್ದಾರೆ ಎಂದು ಹಣಕಾಸು ಸಚಿವಾಲಯ ಮೂಲಗಳು ಸ್ಪಷ್ಟಪಡಿಸಿವೆ. ಮಾರುಕಟ್ಟೆ ನಿಯಂತ್ರಕ ಮುಖ್ಯಸ್ಥರಾಗಿರುವ ಮೊದಲ ಮಹಿಳೆ ಮಾತ್ರವಲ್ಲದೆ, ಖಾಸಗಿ ವಲಯದ ಮೊದಲ ವ್ಯಕ್ತಿಯೂ ಹೌದು.
ಮಾಧಬಿ ಪುರಿ ಬುಚ್ ಸೆಬಿಯ ಮಾಜಿ ಪೂರ್ಣವಧಿಯ ಸದಸ್ಯರಾಗಿದ್ದು, ಮಾರುಕಟ್ಟೆ ನಿಯಂತ್ರಕದಿಂದ ಸ್ಥಾಪಿಸಲಾದ ಹೊಸ ತಂತ್ರಜ್ಞಾನ ಸಮಿತಿಯನ್ನು ಮುನ್ನಡೆಸಲು ಹಿಂದೆ ನಾಮನಿರ್ದೇಶನ ಮಾಡಲಾಗಿತ್ತು.
ಬುಚ್ ಐಸಿಸಿ ಬ್ಯಾಂಕ್ ಮೂಲಕ ವೃತ್ತಿ ಜೀವನ ಆರಂಭಿಸಿದ್ದು ಐಸಿಸಿಐ ಸೆಕ್ಯುರಿಟೀಸ್ ನ ಎಂಡಿ ಮತ್ತು ಸಿಇಒ ಆಗಿ ಫೆಬ್ರವರಿ 2009 ರಿಂದ ಮೇ 2011ರವರೆಗೂ ಸೇವೆ ಸಲ್ಲಿಸಿದ್ದರು. 2011ರಲ್ಲಿ ಅವರು ಗ್ರೇಟರ್ ಪೆಸಿಫಿಕ್ ಕ್ಯಾಪಿಟಲ್ ಎಲ್ಎಲ್ಪಿಗೆ ಸೇರ್ಪಡೆ ಆಗಲು ಸಿಂಗಾಪೂರಕ್ಕೆ ತೆರಳಿದ್ದರು.