ನವದೆಹಲಿ, ಫೆ 28 (DaijiworldNews/MS): ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 5ನೇ ದಿನಕ್ಕೆ ಕಾಲಿಟ್ಟಿದ್ದು ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿರುವುದರಿಂದ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಇದೀಗ ಕೇಂದ್ರ ಸಚಿವರ ತಂಡ ಉಕ್ರೇನ್ ನ ನೆರೆರಾಷ್ಟ್ರಗಳಿಗೆ ತೆರಳಿದೆ.
ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿಕೆ ಸಿಂಗ್ ಅವರು ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಸಂಘಟಿಸಲು ಮತ್ತು ಸಹಾಯ ಮಾಡಲು ನೆರೆಯ ದೇಶಗಳಿಗೆ ತೆರಳಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈ ನಾಲ್ವರು ಹಿರಿಯ ಸಚಿವರುಗಳು "ಭಾರತದ ವಿಶೇಷ ರಾಯಭಾರಿ"ಗಳಾಗಿ ಉಕ್ರೇನ್ ಸುತ್ತಮುತ್ತಲಿನ ದೇಶಗಳಿಗೆ ತೆರಳಿ ಸ್ಥಳಾಂತರಕ್ಕೆ ಸಹಾಯ ಮಾಡಲಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾ ಮತ್ತು ಮೊಲ್ಡೊವಾಗಳ ಉಸ್ತುವಾರಿ ವಹಿಸಲಿದ್ದಾರೆ; ಕಿರಣ್ ರಿಜಿಜು ಸ್ಲೋವಾಕಿಯಾಕ್ಕೆ ಹಾರಲಿದ್ದಾರೆ; ಹರ್ದೀಪ್ ಪುರಿ ಹಂಗೇರಿಗೆ ತೆರಳಲಿದ್ದು, ವಿಕೆ ಸಿಂಗ್ ಪೋಲೆಂಡ್ನ ಉಸ್ತುವಾರಿ ವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಹಲವು ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು.ಮೋದಿ ಉಕ್ರೇನ್ ಬಿಕ್ಕಟ್ಟಿನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವುದು ಮತ್ತು ಅವರನ್ನು ಸ್ಥಳಾಂತರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರತಿಪಾದಿಸಿದ್ದರು.