ಶಿವಮೊಗ್ಗ, ಫೆ 28 (DaijiworldNews/MS): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆ ನಂತರ ನಗರದಲ್ಲಿ ಸಂಭವಿಸಿದ ಗಲಭೆಯಲ್ಲಿ ಸಾವನ್ನಪ್ಪಿದ ವಿಶ್ವನಾಥ ಶೆಟ್ಟಿ ಅವರ ತಾಯಿ ಈಗ ಜೀವನೋಪಾಯಕ್ಕಾಗಿ ರಸ್ತೆಗಳಲ್ಲಿ ಅಲೆದಾಡುತ್ತ ಚಿಂದಿ ಆಯುತ್ತಿದ್ದಾರೆ.
ವಿಶ್ವನಾಥ ಶೆಟ್ಟಿ ಹತ್ಯೆಗೀಡಾದ ಸಂದರ್ಭದಲ್ಲಿ ಅವರ ತಾಯಿ ಮೀನಾಕ್ಷಮ್ಮ ಅವರನ್ನು ಸ್ವಂತ ತಾಯಿಯಂತೆ ನೋಡಿಕೊಳ್ಳುತ್ತೇವೆ ಎಂದು ಘೋಷಿಸಿದವರು ಹಲವರು. ಆದರೆ, ಅವರ ಯಾರೂ ಭರವಸೆಯನ್ನು ಈಡೇರಿಸಿಲ್ಲ, ಸಂಕಷ್ಟದಲ್ಲಿರುವವಿಶ್ವನಾಥ ಶೆಟ್ಟಿ ತಾಯಿಗೆ ಸಹಾಯ ಹಸ್ತ ಚಾಚಿಲ್ಲ. ಮನೆಯಲ್ಲಿ ವಿದ್ಯುತ್ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. 60 ದಾಟಿದ ಮೀನಾಕ್ಷಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗುವ ಅಕ್ಕಿಯನ್ನು ತಂದು ಎಲೆ ಕಡ್ಡಿಗಳನ್ನು ಆಯ್ದು ತಂದು ಒಲೆ ಹಚ್ಚಿ ಹಚ್ಚಿ ಅಡುಗೆ ಮಾಡಿ ಹಸಿವು ನೀಗಿಸಿಕೊಳ್ಳುತ್ತಾರೆ. .
ಕಡು ಬಡತನದ ಸುಳಿಗೆ ಸಿಲುಕಿದ್ದ ವಿಶ್ವನಾಥ ಶೆಟ್ಟಿ ಅವರ ಪತ್ನಿ ಎರಡು ವರ್ಷಗಳ ಹಿಂದೆ ಜಾಂಡೀಸ್ನಿಂದ ಮೃತಪಟ್ಟಿದ್ದಾರೆ. ಆಕೆಯ ಮಗ ಆದಿತ್ಯ ತನ್ನ ತಾಯಿಯ ತವರುಮನೆ ಕೊಪ್ಪದಲ್ಲಿ ಏಳನೇ ತರಗತಿ ಓದುತ್ತಿದ್ದಾನೆ. ಮಗಳೂ ಅನಾರೋಗ್ಯದಿಂದ ಸಾವನ್ನಪ್ಪಿದ ನಂತರ ಮೀನಾಕ್ಷಮ್ಮ ಒಂಟಿಯಾಗಿ ಅನಾಥಳಾಗಿದ್ದಾರೆ.
2015ರಲ್ಲಿ ಇಲ್ಲಿ ನಡೆದ ಪಿಎಫ್ಐ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಘರ್ಷಣೆ ನಡೆದಿದ್ದು, ಗಾಜನೂರು ಸಮೀಪದ ಅಲ್ಕೊಳದ ವಿಶ್ವನಾಥ ಶೆಟ್ಟಿ ಎಂಬುವವರನ್ನು ಪಿಎಫ್ಐ ಕಾರ್ಯಕರ್ತರು ಹತ್ಯೆ ಮಾಡಿದ್ದರು. ಇದಾದ ನಂತರ ಹಿಂದೂಪರ ಸಂಘಟನೆಗಳು ಶಿವಮೊಗ್ಗ ನಗರ ಬಂದ್ ಮತ್ತು ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದವು. ಪ್ರತಿಭಟನೆ ರಾಜ್ಯದೆಲ್ಲೆಡೆ ವ್ಯಾಪಿಸಿತು. ಕುಟುಂಬವನ್ನು ನಾವು ಸಲಹುತ್ತೇವೆ. ಅವರ ಕುಟುಂಬವನ್ನು ಅನಾಥವಾಗಲು ಬಿಡುವುದಿಲ್ಲ ಎಂದುದೊಡ್ಡ ಭರವಸೆಗಳನ್ನು ನೀಡಿ ಭಾವನಾತ್ಮಕ ಭಾಷಣಗಳನ್ನು ಮಾಡಿದವರು ಪ್ರತಿಭಟನೆಗಳು ಕಾವು ಕಮ್ಮಿಯಾದ ಬಳಿಕ ಮನೆಯ ಕಡೆ ತಲೆ ಹಾಕಿಯೂ ಮಲಗಿಲ್ಲ .
ವಿಶ್ವನಾಥ್ ಅವರ ತಾಯಿ ಈಗ ಒಂದು ತುತ್ತು ಅನ್ನಕ್ಕೂ ಪರದಾಡುತ್ತಿದ್ದು, ಸರಾಕದಿಂದ ಸಿಗುವ ಸಂಧ್ಯಾ ಸುರಕ್ಷಾ ಮಾಸಿಕ ಪಿಂಚಣಿಯೂ ಸಿಗುತ್ತಿಲ್ಲ. ಮೀನಾಕ್ಷಮ್ಮ ಅವರು, " ಜೀವ ಇರುವವರೆಗೆ ಹೊಟ್ಟೆ ತುಂಬಿಸಿಕೊಳ್ಳಬೇಕಲ್ವಾ, ನ್ಯಾಯಬೆಲೆ ಅಂಗಡಿಯಿಂದ ತಿಂಗಳಿಗೆ 10ಕೆ.ಜಿ. ಅಕ್ಕಿ ಕೊಡುತ್ತಾರೆ. ಪ್ರತಿದಿನ ಬೆಳಗ್ಗೆ ರಸ್ತೆ, ತಿಪ್ಪೆಗಳಲ್ಲಿ ಪ್ಲಾಸ್ಟಿಕ್ ಆಯುವುದರಿಂದ 10ರಿಂದ 20 ರೂ. ಬರುತ್ತೆ. ಅದರಲ್ಲೇ ತರಕಾರಿ, ದಿನಸಿ, ಬಿಪಿ ಮಾತ್ರೆ ಎಲ್ಲವನ್ನು ಸರಿದೂಗಿಸಬೇಕು" ಎನ್ನುವಷ್ಟರಲ್ಲಿ ಕಣ್ಣಂಚಲ್ಲಿ ನೀರು ತುಂಬಿತ್ತು.
''ಮಗ ಬದುಕಿದ್ದರೆ ಹೀಗೆ ಇರುತ್ತಿರಲಿಲ್ಲ, ಎರಡು ವರ್ಷ ಪಿಂಚಣಿಗಾಗಿ ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆದಾಡಿ ವಿಫಲನಾದೆ. ಮೂರು ವರ್ಷಗಳ ಹಿಂದೆ ಬಿಲ್ ಪಾವತಿಸದ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ನೀರಿನ ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು. ನಾನು ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ, ನನ್ನ ಬಳಿ ಗ್ಯಾಸ್ ಸಿಲಿಂಡರ್ ಇಲ್ಲ, ನಾನು ಕೆಲವು ಒಣ ಎಲೆಗಳನ್ನು ಕಸ ಕಡ್ಡಿ ಹೆಕ್ಕಿ ತಂದು ಒಲೆ ಹಚ್ಚಿ ಅಕ್ಕಿ ಬೇಯಿಸುತ್ತೇನೆ, ”ಎಂದು ಮೀನಾಕ್ಷಮ್ಮ ವಿವರಿಸುತ್ತಾರೆ.
ಮೀನಾಕ್ಷಮ್ಮನವರ ದಯನೀಯ ಸ್ಥಿತಿಯ ಬಗ್ಗೆ ತಿಳಿದ ಜೆಡಿಎಸ್ ಮುಖಂಡ ಎಂ ಶ್ರೀಕಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್ ಮತ್ತು ನೀರಿನ ಸಂಪರ್ಕ ಹಾಗೂ ಮನೆಗೆ ಬಣ್ಣ ಬಳಿಯಲು ವ್ಯವಸ್ಥೆ ಮಾಡಿದ್ದಾರೆ. ಅವರಿಗೆ ಸಂಧ್ಯಾಸುರಕ್ಷೆ ಮಾಸಿಕ ಪಿಂಚಣಿ ಮಾಡಿಸವ ಜವಾಬ್ದಾರಿಯನ್ನು ತಮ್ಮ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದರೆ. ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಗ್ಯಾಸ್ ಸಂಪರ್ಕ, ಒಲೆ, ಮೂರು ತಿಂಗಳಿಗಾಗುವಷ್ಟು ದಿನಸಿ ಸರಬರಾಜು ವ್ಯವಸ್ಥೆ ಮಾಡಿದ್ದಾರೆ.
ಯುವಸೇನೆ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಆಕೆಗೆ ಬೇಕಾದ ವಸ್ತುಗಳನ್ನು ಹಾಗೂ ಔಷಧಗಳನ್ನು ಒದಗಿಸುವ ಜವಾಬ್ದಾರಿಯನ್ನು ನಮ್ಮು ಯುವ ಸೇನೆ ವಹಿಸಿಕೊಳ್ಳಲಿದೆ ಎಂದಿದ್ದಾರೆ
ವಿಪರ್ಯಾಸ ಎಂದರೆ ವಿಶ್ವನಾಥ್ ಮರಣವನ್ನಪ್ಪಿದ ಮೂರು ನಾಲ್ಕು ತಿಂಗಳ ಅವಧಿಯಲ್ಲಿ ಹಾಗೆ ಮಾಡ್ತೀವಿ, ಹೀಗೆ ಮಾಡ್ತೀವಿ ಅಂದ ಬಿಜೆಪಿ ಪಕ್ಷದ ಮುಖಂಡರಾಗಲಿ, ಸಂಘ ಪರಿವಾರದ ಕಾರ್ಯಕರ್ತರಾಗಲಿ ಅಥವಾ ಮತ್ತಿನ್ಯಾವುದೋ ಸಂಘಟನೆಯವರಾಗಲಿ ತಪ್ಪಿಯೂ ಈಕಡೆ ತಲೆ ಹಾಕಿಲ್ಲ.
ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಮನೆಗೆ ಬೇಟಿ ನೀಡಿ ಸಾಂತ್ವಾನ ಹೇಳಿದ್ದ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ನಂತರ 2015ರ ಗಲಭೆಯಲ್ಲಿ ಹತ್ಯೆಗೀಡಾಗಿದ್ದ ವಿಶ್ವನಾಥ್ ಶೆಟ್ಟಿಯವರ ಮನೆಗೆ ಬೇಟಿ ನೀಡಿದ್ದ ನಟ,ಬಿಗ್ಬಾಸ್ ಸ್ಪರ್ಧಿ ಪ್ರಥಮ್ ಭೇಟಿ ನೀಡಿ, 50 ಸಾವಿರ ರೂ. ನೀಡಿದ್ದರು.