ನವದೆಹಲಿ, ಫೆ 28 (DaijiworldNews/MS): ಉಕ್ರೇನ್-ರಷ್ಯಾ ಸಂಘರ್ಷ ಹಿನ್ನಲೆಯಲ್ಲಿ ಭಾನುವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ.
ದೆಹಲಿಯ ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿದಂತೆ ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದು ಉಕ್ರೇನ್ ಬಿಕ್ಕಟ್ಟಿನ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು .
ಸಭೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಅವರನ್ನು ಸ್ಥಳಾಂತರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಮೋದಿ ಹೇಳಿದರು. ಮೋದಿ ಅವರು ಉತ್ತರ ಪ್ರದೇಶದಿಂದ ಹಿಂದಿರುಗಿದ ತಕ್ಷಣ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಅಲ್ಲಿ ಅವರು ರಾಜ್ಯ ವಿಧಾನಸಭಾ ಚುನಾವಣೆಯ ಬಿಜೆಪಿಯ ಪ್ರಚಾರದ ಭಾಗವಾಗಿ ರ್ಯಾಲಿಗಳಲ್ಲಿ ಭಾಗವಹಿಸಿದ್ದರು.
ಇನ್ನು ಸಭೆಯಲ್ಲಿ ಭಾರತೀಯರ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಸ್ಥಳಾಂತರಿಸುವಿಕೆಯನ್ನು ತ್ವರಿತಗೊಳಿಸಲು ಉಕ್ರೇನ್ನ ನೆರೆಯ ರಾಷ್ಟ್ರಗಳೊಂದಿಗೆ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಚರ್ಚಿಸಲಾಗಿದೆ. ಇದಕ್ಕಾಗಿ ಉಕ್ರೇನ್ ನೆರೆ ಹೊರೆಯ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಭೆ ನಡೆಸಿ ಭಾರತೀಯರ ಸುರಕ್ಷಿತ ರವಾನೆಗೆ ಯೋಜನೆ ರೂಪಿಸಲಾಗುತ್ತಿದೆ. ಅಲ್ಲದೆ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯನ್ನು ಸಂಪರ್ಕಿಸಿ ಗಡಿಗಳತ್ತ ಬರಲಾಗದ ಭಾರತೀಯರ ಹಾಲಿ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ ಹೆಚ್ಚಿನ ಸಂಖ್ಯೆಯ ಭಾರತೀಯರು, ಹೆಚ್ಚಾಗಿ ವಿದ್ಯಾರ್ಥಿಗಳು, ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ. ಭಾರತವು ಅವರನ್ನು ಸ್ಥಳಾಂತರಿಸಲು ಪ್ರಾರಂಭಿಸಿದೆ ಮತ್ತು ಶನಿವಾರದಿಂದ 2000 ಕ್ಕೂ ಹೆಚ್ಚು ಜನರನ್ನು ಮರಳಿ ಕರೆತರಲಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ನಾಯಕ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿರುವ ಮೋದಿ, ಬಿಕ್ಕಟ್ಟನ್ನು ಶಮನಗೊಳಿಸಲು ಮಾತುಕತೆಗೆ ಭಾರತ ಕರೆ ನೀಡಿದೆ.