ಬೆಂಗಳೂರು, ಫೆ 27 (DaijiworldNews/KP): ರಾಜ್ಯದ ಸಾವಿರಕ್ಕೂ ಹೆಚ್ಚು ತಾಂಡಾಗಳು ಶೀಘ್ರದಲ್ಲಿಯೇ ಕಂದಾಯ ಗ್ರಾಮಗಳಾಗಿ ಪರಿವರ್ತನೆ ಆಗಲಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ವಸಂತನಗರದಲ್ಲಿರುವ ಬಂಜಾರ ಭವನದಲ್ಲಿ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ಭಾನುವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಅವರ 283ನೇ ಜಯಂತಿ, ಬಂಜಾರ ದೀವಿಗೆ ಸ್ಮರಣ ಸಂಚಿಕೆ ಬಿಡುಗಡೆ, ಬಂಜಾರ ಕಲಾಮೇಳ ಉದ್ಘಾಟಿಸಿ ಮಾತನಾಡಿದ ಅವರು, ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿ, ಸರ್ಕಾರದ ಎಲ್ಲ ಸೌಲಭ್ಯಗಳನ್ನು ನೀಡಲು ಕಂದಾಯ ಸಚಿವನಾಗಿ ಈಗಾಗಲೇ ಕಾರ್ಯಾದೇಶ ಮಾಡಿದ್ದೇನೆ ಎಂದರು.
ರಾಜ್ಯದ ಅತ್ಯಂತ ಸೌಮ್ಯ ಸ್ವಭಾವದ ಜನಾಂಗಗಳಲ್ಲಿ ಬಂಜಾರ ಜನಾಂಗ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಅಲ್ಲದೆ ಬಂಜಾರ ಜನಾಂಗದವರು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತರು, ಹಾಗಾಗಿ ತಾಂಡಾಗಳಲ್ಲಿ ವಾಸ ಮಾಡುವ ಈ ಜನಾಂಗದವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಇನ್ನು ತಾಂಡಾ ವಾಸಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಎನ್ನುವುದು ನನ್ನ ಆಶಯ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಸಂದರ್ಭದಲ್ಲಿ ಲಂಬಾಣಿ ತಾಂಡಾದಲ್ಲಿ ವಾಸ್ತವ್ಯ ಮಾಡಿ, ಅವರ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಹೇಳಿದರು.
ಇನ್ನು ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಸಂಸದ ಉಮೇಶ್ ಜಾಧವ್, ಬಿ.ಟಿ. ಲಲಿತಾ ನಾಯಕ್, ಶಾಸಕ ರಾಜಕುಮಾರ ತೆಲ್ಕೂರ, ಮಿಂಟೋ ನಿರ್ದೇಶಕಿ ಸುಜಾತಾ ರಾಥೋಡ್ರವರು ಉಪಸ್ಥಿತರಿದ್ದರು.