ರಾಮನಗರ, ಫೆ 27 (DaijiworldNews/HR): ನಮ್ಮ ಪಕ್ಷದ ಸಾಧನೆ ಹಾಗೂ ಇತಿಹಾಸವನ್ನು ಮನದಲ್ಲಿಟ್ಟುಕೊಂಡು ನಾವು ಇಂದು ಮೇಕೆದಾಟು ಹೋರಾಟ ಆರಂಭಿಸುತ್ತಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಮ್ಮ ಹೋರಾಟದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮೇಕೆದಾಟು ಪಾದಯಾತ್ರೆ 2.0ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಇದು ನಮ್ಮ ಹೋರಾಟ ಅಲ್ಲ, ರಾಜ್ಯದ ಜನರ ಬದುಕಿಗಾಗಿ ಹೋರಾಟ, ಬೆಂಗಳೂರು ಜನರ ಕುಡಿಯುವ ನೀರಿಗಾಗಿ ಹೋರಾಟ, ಕಾವೇರಿ ಜಲಾನಯನ ಪ್ರದೇಶದ ರೈತರು, ಜನರ ಹಿತಕ್ಕಾಗಿ ಹೋರಾಟ. ಅದಕ್ಕಾಗಿ ಐದು ದಿನ ಬಿಸಿಲಿದ್ದರೂ ನಾವು ಹೆಜ್ಜೆ ಹಾಕೋಣ ಎಂದರು.
ಇನ್ನು ಮೇಕೆದಾಟು ಹೋರಾಟವನ್ನು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲರೂ ಸೇರಿ ದೆಹಲಿಯ ಸಂಸತ್ ಭವನದ ಎದುರು ಧರಣಿ ಮೂಲಕ ಮಾಡಿದ್ದು, ಈಗ ಅದೇ ಯೋಜನೆಯನ್ನು ಕಾರ್ಯರೂಪಕ್ಕೆ ತನ್ನಿ ಎಂದು ಪಾದಯಾತ್ರೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ 2 ದಿನದಲ್ಲಿ ಪರಿಸರ ಇಲಾಖೆ ಅನುಪತಿ ಪಡೆದು ಯೋಜನೆ ಆರಂಭಿಸಬಹುದು. ನಾವು ಆಗ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಇದೇ ರೀತಿ ಬಂದು ನಿಮಗೆ ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದ್ದಾರೆ.