ರಾಯ್ಪುರ, ಫೆ 27 (DaijiworldNews/KP): ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳಾ ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಖಚಿತ ಮಾಹಿತಿ ಮೇರೆಗೆ ಜಿಲ್ಲಾ ರಿಸರ್ವ್ ಗಾರ್ಡ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ ಸೇರಿದ ಸಿಬ್ಬಂದಿ ಶನಿವಾರ ರಾತ್ರಿ ರಾಜ್ಯ ರಾಜಧಾನಿ ರಾಯ್ಪುರದಿಂದ 450 ಕಿಮೀ ದೂರದಲ್ಲಿರುವ ಜಬೇಲಿ, ದುರ್ಧಾ ಮತ್ತು ಮೊಸ್ಲಾ ಗ್ರಾಮಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಗಸ್ತು ತಿರುಗುವ ತಂಡವು ಶಸ್ತ್ರಸಜ್ಜಿತ ನಕ್ಸಲರ ಗುಂಪಿನೊಂದಿಗೆ ಭಾನುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ನೈಮೇದ್ ಪೊಲೀಸ್ ಠಾಣೆ ವ್ಯಾಪ್ತಿಯ ಜಬೇಲಿ ಗ್ರಾಮದ ಬಳಿಯ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆಸಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಸುಂದರರಾಜ್ ಪಿ ತಿಳಿಸಿದ್ದಾರೆ.
ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಇಬ್ಬರು ಮಹಿಳಾ ನಕ್ಸಲರ ದೇಹವನ್ನು ಹಾಗೂ 12 ಬೋರ್ ಗನ್, 9 ಎಂಎಂ ಪಿಸ್ತೂಲ್, ಕಾರ್ಡೆಕ್ಸ್ ವೈರ್, ಸ್ಫೋಟಕ ವಸ್ತುಗಳು ಮತ್ತು ಇತರ ಮಾವೋವಾದಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.