ಮಣಿಪುರ, ಫೆ 27 (DaijiworldNews/KP): ಮನೆಯೊಂದರಲ್ಲಿ ಸ್ಫೋಟವುಂಟಾಗಿ 6ವರ್ಷದ ಬಾಲಕ ಸೇರಿ ಇಬ್ಬರು ಮೃತಪಟ್ಟು, ಐವರು ಗಂಭೀರ ಗಾಯಗೊಂಡ ಘಟನೆ ಮಣಿಪುರದ ಚುರಾಚಾಂದ್ಪುರ ಜಿಲ್ಲೆಯ ಗಾಂಗ್ಪಿಮೌಲ್ ಎಂಬಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಈ ಸ್ಫೋಟವುಂಟಾಗಲು ಕಾರಣ ಸಣ್ಣ ಫಿರಂಗಿ ಎಂದು ಹೇಳಲಾಗಿದ್ದು, ಮೃತರನ್ನು ಮಾಂಗ್ಮಿನ್ಲಾಲ್ ಮತ್ತು 22 ವರ್ಷದ ಲ್ಯಾಂಗಿನ್ಸಾಂಗ್ ಎಂದು ಗುರುತಿಸಲಾಗಿದೆ.
ಇನ್ನು ಗಂಭೀರ ಗಾಯಗೊಂಡಿರುವವರನ್ನು ಹತ್ತಿರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಪೋಟ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಇನ್ನಿತರ ಭದ್ರತಾ ಪಡೆ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಮಣಿಪುರದ ಎರಡು ಹಂತದ ವಿಧಾನಸಭೆ ಚುನಾವಣೆಗೆ ಇನ್ನೊಂದೇ ದಿನ ಬಾಕಿ ಇರುವಾಗ ಗಾಂಗ್ಪಿಮೌಲ್ ಎಂಬ ಹಳ್ಳಿಯ ಮನೆಯೊಂದರಲ್ಲಿ ಸ್ಫೋಟವುಂಟಾಗಿರುವು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದಕ್ಕೂ ಮೊದಲು ಜನವರಿ 8ರಂದು ಮಣಿಪುರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಎರಡನೇ ದಿನದಲ್ಲಿ ಇಂಫಾಲ್ನ ಪಶ್ಚಿಮ ಜಿಲ್ಲೆಯ ಸಮುರೌನಲ್ಲಿ ಬಿಜೆಪಿ ಕಾರ್ಯಕರ್ತ ಮತ್ತು ಅವರ ಸೋದರ ಸಂಬಂಧಿಯನ್ನು ಹತ್ಯೆ ಮಾಡಲಾಗಿತ್ತು. ಅದಾದ ಬಳಿಕ ಈ ಸ್ಫೋಟ ನಡೆದಿದ್ದು, ಮನೆಯಲ್ಲಿ ಫಿರಂಗಿ ಯಾಕಿತ್ತು? ಸ್ಫೋಟ ಉಂಟಾಗಿದ್ದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ತನಿಖೆ ನಡೆಯುತ್ತಿದೆ.
ಇನ್ನು ಮಣಿಪುರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಫೆ.20 ಮತ್ತು ಎರಡನೇ ಹಂತ ಮತದಾನ ಮಾರ್ಚ್5ಕ್ಕೆ ನಡೆಯಲಿದ್ದು, ಮತ ಎಣಿಕೆ ಮಾರ್ಚ್ 10ರಂದು ನಡೆಯಲಿದೆ.