ರಾಮನಗರ, ಫೆ 27 (DaijiworldNews/KP): ಮೇಕೆದಾಟು ಯೋಜನೆ ಅನುಷ್ಟಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಎರಡನೇ ಹಂತದ ಪಾದಯಾತ್ರೆ ಭಾನುವಾರ ರಾಮನಗರಿಂದ ಪುನರಾರಂಭಗೊಂಡಿದೆ.
ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮೇಕೆದಾಟು ಯೋಜನೆಗೆ ಚಾಲನೆ ನೀಡಿದ್ದಾರೆ.
ಕೊರೊನಾ ಸೋಂಕಿನ ಸ್ಫೋಟಕ್ಕೆ, ಕೋರ್ಟ್ ಸೂಚನೆ ಮೇರೆಗೆ ಕಾಂಗ್ರೆಸ್ ನಾಯಕರು ಕಳೆದ ಜನವರಿ 9 ರಿಂದ ಶುರುವಾಗಿದ್ದ ಮೇಕೆದಾಟು ಪಾದಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಇದೀಗಾ ಎರಡನೇ ಹಂತದ ಪಾದಯಾತ್ರೆ ಮಾರ್ಚ್ 3 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದೊಂದಿಗೆ ಮುಕ್ತಾಯವಾಗಲಿದೆ.
ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶನಿವಾರ ಪಾದಯಾತ್ರೆ ಆರಂಭವಾಗಲಿರುವ ರಾಮನಗರ ಹಾಗೂ ಅಂತ್ಯಗೊಳ್ಳುವ ಸ್ಥಳ ನ್ಯಾಷನಲ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬೆಂಗಳೂರು ನಾಗರೀಕರಿಗೆ ಕುಡಿಯುವ ನೀರು ಪೂರೈಸಲು, ಕಾವೇರಿ ಪ್ರದೇಶದ ರೈತರನ್ನು ಬದುಕಿಸಲು ನೀರಿಗಾಗಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಭಾನುವಾರ ಬೆಳಗ್ಗೆ 9 ಗಂಟೆಗೆ ತಾಯಿ ಚಾಮುಂಡೇಶ್ವರಿಗೆ ಪೂಜೆ ನಂತರ ಪಾದಯಾತ್ರೆ ಆರಂಭವಾಗಲಿದೆ ಎಂದು ಹೇಳಿದರು.
ಇವತ್ತು ರಾಮನಗರದಿಂದ ಶುರುವಾಗಲಿರೋ ಪಾದಯಾತ್ರೆ ಸಂಜೆ ಬಿಡದಿ ತಲುಪಿ ಬಿಡದಿಯಲ್ಲೇ ವಾಸ್ತವ್ಯ ಹೂಡಲಾಗುತ್ತಿದೆ. ನಂತರ 28ರಂದು ಬಿಡದಿಯಿಂದ ಬೆಂಗಳೂರಿಗೆ ಹೊರಡಲಿರುವ ಪಾದಯಾತ್ರೆ ಸೋಮವಾರ ಸಂಜೆ ಕೆಂಗೇರಿ ತಲುಪಲಿದೆ. ಇನ್ನು, ಈ ಮೊದಲು ಬೆಂಗಳೂರಿನಲ್ಲಿ 5 ದಿನ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಕೇವಲ 3 ದಿನಕ್ಕೆ ಇಳಿಸಲಾಗಿದೆ.
ಇನ್ನು ಪಾದಾಯಾತ್ರೆಯಲ್ಲಿ ಅಹಿತಕರ ಘಟನೆ ನಡೆಯಾದ ಹಾಗೆ ಕೇಂದ್ರ ವಲಯ ಐಜಿಪಿ ನೇತೃತ್ವದಲ್ಲಿ ಭದ್ರತೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಬ್ಬ ಎಸ್ಪಿ, ಇಬ್ಬರು ಎಎಸ್ಪಿಗಳು, 4 ಡಿವೈಎಸ್ಪಿಗಳು, 12 ಇನ್ಸ್ಪೆಕ್ಟರ್ಗಳು, 38 ಪಿಎಸ್ಐ, 37 ಎಎಸ್ಐ, 600 ಪೊಲೀಸ್ ಸಿಬ್ಬಂದಿ, 50 ಮಹಿಳಾ ಪಿಸಿಗಳು, 100 ಹೋಮ್ಗಾರ್ಡ್, 20 ಕೆಎಸ್ಆರ್ಪಿ ತುಕಡಿ, 12 ಡಿಎಆರ್ ಸೇರಿದಂತೆ 1,200 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಇನ್ನು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಾದಯಾತ್ರೆ ನಡೆಯುವುದರಿಂದ 2 ದಿನ ಸಂಚಾರಕ್ಕೆ ಬದಲಿ ಮಾರ್ಗ ಬಳಸಬೇಕಿದೆ. ಮಂಡ್ಯ ಕಡೆಯಿಂದ ಬರುವವರು ಮದ್ದೂರಿನಿಂದ ಕುಣಿಗಲ್ ಮಾರ್ಗ, ಮೈಸೂರು, ಕೊಡಗು ಕಡೆಯವರು ಹಾಸನ ಹೆದ್ದಾರಿ ಬಳಸಬೇಕಿದೆ. ಮದ್ದೂರಿನಿಂದ ಕನಕಪುರ ಮಾರ್ಗವಾಗಿ ಬೆಂಗಳೂರು ಸೇರಬೇಕಾಗಿದೆ.