ಚಿಕ್ಕಬಳ್ಳಾಪುರ, ಫೆ 26 (DaijiworldNews/KP): ಮೇಕೆದಾಟು ಮುಂದಿಟ್ಟುಕೊಂಡು ಓಟ್ಬ್ಯಾಂಕ್ ರಾಜಕಾರಣ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದ ಅವರು, ಕುಡಿಯುವ ನೀರು ಪೂರೈಸುವ ಮೇಕೆದಾಟು ಯೋಜನೆಯನ್ನು ಹೈಜಾಕ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ರಾಜ್ಯದ ಜನರನ್ನು ದಿಕ್ಕುತಪ್ಪಿಸುವ ರಾಜಕಾರಣ ಮಾಡುತ್ತಿದೆ ಎಂದರು.
ಅಲ್ಲದೆ ರಾಜ್ಯದಲ್ಲಿ ಏಳು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವು ತನ್ನ ಅಧಿಕಾರಾವಧಿಯಲ್ಲಿ ಡಿಪಿಆರ್ ಮಾತ್ರ ಮಾಡಿ ಕಾಲಹರಣ ಮಾಡಿದೆಯೇ ಹೊರತು ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.
ಸರಕಾರ ಈ ಬಾರಿಯ ಅಧಿವೇಶನದಲ್ಲಿ ವೇತನ ಹೆಚ್ಚಳದ ಬಗ್ಗೆ ಲೇಖನಾನುಧಾನ ಪಡೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊರೋನಾ ಮೊದಲ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರೂ ಸೇರಿದಂತೆ ಎಲ್ಲಾ ಸಚಿವರು ಎರಡು ವರ್ಷಗಳ ಕಾಲ ವೇತನವನ್ನೇ ಪಡೆದಿಲ್ಲ ಈ ಬಗ್ಗೆ ಯಾಕೆ ಯಾರು ಬರೆಯುವುದಿಲ್ಲ, ನಮಗೂ ಕೂಡ ಖಾಸಗಿ ಬದುಕಿದೆ ಎಂದು ಹೇಳುವ ಮೂಲಕ ವೇತನ ಹೆಚ್ಚಳವನ್ನು ಸಮರ್ಥಿಸಿಕೊಂಡರು.
ಇನ್ನು ಉಕ್ರೇನ್ನಲ್ಲಿರುವ ರಾಜ್ಯದ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದ ಅವರು, ಉಕ್ರೇನ್ನಲ್ಲಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಸುರಕ್ಷತೆಗೆ ಮುಖ್ಯಮಂತ್ರಿಗಳು ಮತ್ತು ಸರಕಾರ ಅಗತ್ಯಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೆ ಮುಖ್ಯಮಂತ್ರಿಗಳು ಕೇಂದ್ರದ ವಿದೇಶಾಂಗ ಸಚಿವಾಲಯದ ಜತೆ, ಉಕ್ರೇನ್ ರಾಯಭಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನೀವಾಗಿ ಏನು ತೀರ್ಮಾನ ತೆಗೆದುಕೊಂಡು ರೊಮೇನಿಯಾ, ಪೋಲ್ಯಾಂಡ್ ಗಡಿಗಳಿಗೆ ಹೋಗಬಾರದು ಎಂದರು.
ಅಲ್ಲದೆ ವಿದ್ಯಾರ್ಥಿಗಳು ಎಲ್ಲಿದ್ದಿರೋ ಅಲ್ಲಿಯೇ ಸುರಕ್ಷಿತವಾಗಿ ಇರಬೇಕು. ಶೀಘ್ರದಲ್ಲಿಯೇ ಕದನವಿರಾಮ ಘೋಷಣೆಯಾಗುವ ಸಂಭವವಿದೆ. ಇದಾದ ಬಳಿಕ ಜಿಲ್ಲೆಯ 9 ಮಂದಿಯ ಜತೆಗೆ ಎಲ್ಲರನ್ನೂ ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕರೆತರಲಾಗುವುದು. ಅಲ್ಲಿಯೇ ಉಳಿಯಲು ಇಚ್ಚಿಸುವವರು ಅಲ್ಲಿಯೇ ಇರಬಹುದಾಗಿದ್ದು ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಸರಕಾರ ಒದಗಿಸುತ್ತದೆ. ಈ ವಿಚಾರದಲ್ಲಿ ಪೋಷಕರೂ ಆತಂಕಕ್ಕೆ ಒಳಗಾಗುವುದು ಬೇಡ. ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮೆಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಅಧ್ಯಕ್ಷ ಡಿಎಸ್ ಆನಂದರೆಡ್ಡಿ ಬಾಬು, ಬಿಜೆಪಿಯ ಮುಖಂಡರಾದ ನವೀನ್ ಕಿರಣ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳಕುಂಟೆ ಕೃಷ್ಣಮೂರ್ತಿ, ನಗರಸಭೆಯ ಮಾಜಿ ಅಧ್ಯಕ್ಷ ಕೆ. ವಿ. ಮಂಜುನಾಥ್, ಸುಧಾ ವೆಂಕಟೇಶ್, ಮಿಲ್ಟನ್ ವೆಂಕಟೇಶ್, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ನಂದಿ ಶ್ರೀನಿವಾಸ್ ಮತ್ತಿತರು ಉಪಸ್ಥಿತರಿದ್ದರು.