ಅಮೇಠಿ, ಫೆ 26 (DaijiworldNews/KP): ಉತ್ತರ ಪ್ರದೇಶದಲ್ಲಿ ಸಂಪನ್ಮೂಲಕ್ಕೆ ಕೊರತೆ ಇಲ್ಲ. ಆದರೆ ಈ ಹಿಂದೆ ಆಡಳಿತ ನಡೆಸಿದ್ದ ಪಕ್ಷಗಳು, ರಾಜ್ಯವನ್ನು ಅಭಿವೃದ್ಧಿಯಲ್ಲಿ ಹಿಂದುಳಿಯುವಂತೆ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದ ಅಮೇಠಿಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇದುವರೆಗೂ ಆಡಳಿತ ನಡೆಸುತ್ತಿದ್ದ ಪಕ್ಷಗಳು, ರಾಜ್ಯವನ್ನು ಅಭಿವೃದ್ಧಿಯಲ್ಲಿ ಹಿಂದುಳಿಯುವಂತೆ ಮಾಡಿವೆ. ಹೀಗಾಗಿಯೇ ರಾಜ್ಯದ ಜನರು ಉದ್ಯೋಗ ಅರಸಿಕೊಂಡು ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನಕ್ಕೆ ವಲಸೆ ಹೋಗುತ್ತಾರೆ ಎಂದು ಟೀಕಿಸಿದ್ದಾರೆ.
ಅಲ್ಲದೆ ಉತ್ತರ ಪ್ರದೇಶದಲ್ಲಿ ಸಂಪನ್ಮೂಲಕ್ಕೆ ಕೊರತೆ ಇಲ್ಲ. ಆದರೆ ಇಷ್ಟು ವರ್ಷ ಆಳ್ವಿಕೆ ನಡೆಸಿದ ಸಮಾಜವಾದಿ ಪಕ್ಷ, ಬಿಎಸ್ಪಿ ಮತ್ತು ಬಿಜೆಪಿ ನಿಮಗೆ ಸುಳ್ಳು ಭರವಸೆಗಳನ್ನು ನೀಡಿ, ನಿಮ್ಮ ಹಣವನ್ನು ಕಸಿದುಕೊಂಡಿವೆ ಅಷ್ಟೆ' ಎಂದು ಅವರು ಆರೋಪಿಸಿದ್ದಾರೆ.
ಸಣ್ಣ ಮತ್ತು ಮಧ್ಯಮ ಮಟ್ಟದ ವ್ಯಾಪಾರಿಗಳು ಮತ್ತು ರೈತರು ಉತ್ತರಪ್ರದೇಶದ ದೊಡ್ಡ ಉದ್ಯೋಗದಾತರಾಗಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ನೀತಿಗಳಿಂದ ಸಣ್ಣ ವ್ಯಾಪಾರಿಗಳು ಮತ್ತು ರೈತರ ಬೆನ್ನೆಲುಬು ಮುರಿದಂತಾಗಿದೆ ಎಂದು ಹೇಳಿದ್ದಾರೆ.
ಇದೆ ವೇಳೆ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಬಡವರು ಮತ್ತು ದಲಿತರ ಮೇಲೆ ದೌರ್ಜನ್ಯ ನಡೆದಾಗ, ಸಮಾಜವಾದಿ ಪಕ್ಷ ಮತ್ತು ಬಿಜೆಪಿ ನಾಯಕರು ಮನೆಬಿಟ್ಟು ಹೊರಗೆ ಬಂದು ಜನರ ಸಮಸ್ಯೆಗಳನ್ನು ಕೇಳಲಿಲ್ಲ ಎಂದು ಆರೋಪಿಸಿದ್ದಾರೆ.