ಬೆಂಗಳೂರು, ಫೆ 25 (DaijiworldNews/MS): ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿರುವುದನ್ನು ಪ್ರಶ್ನಿಸಿರುವ ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ನ ಪೂರ್ಣ ಪೀಠವು ಶುಕ್ರವಾರವೂ ಮುಂದುವರಿಸಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ.ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರನ್ನು ಒಳಗೊಂಡಿರುವ ಪೀಠ ಪ್ರತಿದಿನ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
ಗುರುವಾರದಂದು ವಾದ - ಪ್ರತಿವಾದದ ಬಳಿಕ ಪಕ್ಷಕಾರರೆಲ್ಲರೂ ನಾಳೆಯೇ (ಶುಕ್ರವಾರ ) ವಾದ ಪೂರ್ಣಗೊಳಿಸಬೇಕು. ಎರಡು ಮೂರು ದಿನಗಳಲ್ಲಿ ಎಲ್ಲರೂ ಲಿಖಿತ ವಾದವನ್ನು ಸಲ್ಲಿಸಬೇಕು. ನಾಳೆಯೇ ತೀರ್ಪು ಕಾಯ್ದಿರಿಸಲಾಗುವುದು ಎಂದು ಪೀಠವು ಸ್ಪಷ್ಟಪಡಿಸಿದ್ದು, ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ 2.30ಕ್ಕೆ ನಿಗದಿಪಡಿಸಿತ್ತು.
ಇಂದು ವಾದ ಆರಂಭವಾಗಿದ್ದು , ಹಿರಿಯ ವಕೀಲ ರವಿವರ್ಮ ಕುಮಾರ್, ಹಿರಿಯ ವಕೀಲ ಮುಚ್ಚಾಲ ಅವರು ತಮ್ಮ ವಾದ ಹಾಗೂ ಪ್ರತ್ಯುತ್ತರ ಪೂರ್ಣಗೊಳಿಸಿದ್ದಾರೆ
ಅರ್ಜಿದಾರ ಡಾ. ವಿನೋದ್ ಕುಲಕರ್ಣಿ ಶುಕ್ರವಾರದಂದು ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದು ಲಿಖಿತ ವಾದ ಸಲ್ಲಿಸುವಂತೆ ಪೀಠ ಸೂಚಿಸಿದೆ.ಹಿಬಾಜ್ಗೆ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿಗಾರಿಕೆ ನಿರ್ಬಂಧ ವಿಧಿಸಲು ಕೋರಿ ಮನವಿ ಸಲ್ಲಿಸಿರುವ ಹಿರಿಯ ವಕೀಲ ಎಸ್ ಬಾಲಕೃಷ್ಣನ್ ಅವರಿಂದ ವಾದ ಆರಂಭ ಮಾಡಿ ಮಕ್ಕಳು ಮತ್ತು ಶಿಕ್ಷಕಿಯರು ಹಿಜಾಬ್ ತೆಗೆಯುವುದನ್ನು ಫೋಟೊ ತೆಗೆಯುವುದು ಮತ್ತು ವಿಡಿಯೊ ಮಾಡದಂತೆ ನಿರ್ಬಂಧಿಸಬೇಕು ಎಂದು ಕೋರಿದ್ದಾರೆ
ಮಾಧ್ಯಮಗಳು ಏನು ಮಾಡುತ್ತಿವೆ ಎಂಬುದನ್ನು ನೀವು ಸಾಬೀತುಪಡಿಸಬೇಕು. ಹಿಜಾಬ್ ಧರಿಸುವವರಿಗೆ ಅವರು ಕಿರುಕುಳ ನೀಡುತ್ತಿದ್ದಾರೆ ಎಂಬುದನ್ನು ನೀವು ತೋರಿಸಬೇಕು. ಇದನ್ನು ತೋರಿಸಲು ದಾಖಲೆಯಲ್ಲಿ ಏನು ಸಲ್ಲಿಸಲಾಗಿಲ್ಲ.ಮಕ್ಕಳ, ಮಹಿಳಾ ಆಯೋಗ, ಪೊಲೀಸ್, ಮಹಿಳೆಯರ ರಕ್ಷಣೆಗೆ 13 ಕಾಯಿದೆಗಳ ರಕ್ಷಣೆ ಇದೆ ಅವನ್ನು ಬಳಸಿಕೊಳ್ಳಿ. ಪಿಐಎಲ್ ಮೂಲಕವಲ್ಲ ಎಂದು ಹೇಳಿದ ಸೂಕ್ತ ಪ್ರಾಧಿಕಾರ ಸಂಪರ್ಕಿಸಲು ಸೂಚಿಸಿ ಮನವಿ ವಜಾಗೊಳಿಸಿದೆ.
ಹೊಸ ಅರ್ಜಿದಾರರ ಪರ ಸುಭಾಶ್ ಝಾ ವಾದ ಮಂಡನೆ ಆರಂಭಿಸಿದ್ದು 1973 ರಿಂದಲೂ ಹಿಜಾಬ್, ಬುರ್ಖಾ, ಗಡ್ಡಗಳ ಬಗ್ಗೆ ತೀರ್ಮಾನವಾಗಿದೆ. ಇನ್ನೆಷ್ಟು ವರ್ಷ ಕೋರ್ಟ್ಗಳು ಈ ವಿಚಾರಗಳನ್ನು ತೀರ್ಮಾನಿಸಬೇಕು. ವಕೀಲರಿಗೆ ಸಮವಸ್ತ್ರವಾಗಿ ಧೋತಿ ಕುರ್ತಾ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಭಾರತದ ಸಂಸ್ಕೃತಿಯಂತೆ ಸಮವಸ್ತ್ರ ಕೋರಲಾಗಿತ್ತು. ಅಲಹಾಬಾದ್ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ. ವಕೀಲರೂ ಸಮವಸ್ತ್ರ ಧರಿಸುತ್ತಾರೆ, ನ್ಯಾಯಮೂರ್ತಿಗಳೂ ಕೂಡಾ ಸಮವಸ್ತ್ರ ಧರಿಸುತ್ತಾರೆ. ಹೀಗಿರುವಾಗ ವಿದ್ಯಾರ್ಥಿಗಳಿಗೆ ಸಮವಸ್ತ್ರ ಅತ್ಯಗತ್ಯ ಎಂದು ಸುಭಾಶ್ ಝಾ ವಾದ ಮಂಡಿಸಿದ್ದಾರೆ.