ನವದೆಹಲಿ, ಫೆ 25 (DaijiworldNews/HR): ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಮನರಂಜನೆ, ಧಾರ್ಮಿಕ ಕಾರ್ಯಕ್ರಮಗಳಿಗೆ ವಿಧಿಸಲಾಗಿರುವ ನಿರ್ಬಂಧಗಳನ್ನು ಸಡಿಲಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ
ಕೋವಿಡ್ ಮಾರ್ಗಸೂಚಿಗಳನ್ನು ಮಾರ್ಚ್ವರೆಗೂ ಅನ್ವಯವಾಗುವಂತೆ ವಿಧಿಸಲಾಗಿತ್ತು. ಆದರೆ ಪ್ರಸ್ತುತ ಕೋವಿಡ್ ಸಂಖ್ಯೆಗಳು ಕ್ಷೀಣಿಸಿರುವುದರಿಂದ ಮತ್ತೆ ನಿರ್ಬಂಧಗಳನ್ನು ಸಡಿಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಸಾಮಾಜಿಕ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಹಬ್ಬಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ಅನುಮತಿ ನೀಡಬಹುದು. ರಾತ್ರಿ ಕಫ್ರ್ಯೂ, ಸಾರ್ವಜನಿಕ ಸಾರಿಗೆಯ ಕಾರ್ಯಾಚರಣೆಗಳು, ಶಾಪಿಂಗ್ ಸಂಕೀರ್ಣಗಳು, ಸಿನಿಮಾ ಹಾಲ್ಗಳು, ಜಿಮ್ಗಳು, ಸ್ಪಾಗಳು, ರೆಸ್ಟೋರೆಂಟ್ಗಳು ಮತ್ತು ಬಾರ್ಗಳು, ಶಾಲಾ-ಕಾಲೇಜುಗಳು, ಕಚೇರಿಗಳು ಮತ್ತು ಇತರ ವಾಣಿಜ್ಯ ಚಟುವಟಿಕೆಗಳನ್ನು ಮುಕ್ತವಾಗಿಸುವಂತೆ ಸೂಚಿಸಿದೆ.
ಇನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಲಾದ ಮಾರ್ಗಸೂಚಿಗಳಲ್ಲಿ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಕೈ ನೈರ್ಮಲ್ಯ ಮತ್ತು ಒಳಾಂಗಣದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡುವಂತೆ ಸಲಹೆ ನೀಡಲಾಗಿದೆ.