ಬೆಂಗಳೂರು, ಫೆ 25 (DaijiworldNews/HR): ಆಪರೇಷನ್ ಮೂಲಕ ಅಧಿಕಾರಕ್ಕೆ ಬಂದರೂ ಬಿಜೆಪಿ ಏನು ಅಭಿವೃದ್ಧಿ ಕೆಲಸ ಮಾಡಿಲ್ಲ.ರಾಜ್ಯದ ಜನರು ಶಾಪ ಹಾಕುತ್ತಿದ್ದಾರೆ, ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಕ್ಕೆ ಬರುವ ವಾತಾವರಣ ನಿರ್ಮಾಣವಾಗುತ್ತಿದೆ. ಆಪರೇಷನ್ ಮೂಲಕ ಅಧಿಕಾರಕ್ಕೆ ಬಂದರೂ ಬಿಜೆಪಿ ಏನು ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಕಿಡಿ ಕಾರಿದ್ದಾರೆ.
ಇನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹೈಕಮಾಂಡ್ ಬೆಂಬಲ ನೀಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಅವರಿಗೆ ಎಲ್ಲೂ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ ಎನ್ನುವ ಸಂದೇಶ ಸಿಕ್ಕಿದೆ ಎಂದರು.
ಈಶ್ವರಪ್ಪ ರಾಷ್ಟ್ರ ಧ್ವಜದ ಬಗ್ಗೆ ಮಾತನಾಡಿದ್ರೆ ಅದನ್ನು ಬಿಜೆಪಿ ನಾಯಕರು ಬೆಂಬಲಿಸುತ್ತಾರೆ.ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ತಪ್ಪು ಎಂದು ಹೇಳಿದ್ದಾರೆ. ಇಷ್ಟೇಲ್ಲ ಆದರೂ ಸಿಎಂ, ರಾಜ್ಯಧ್ಯಕ್ಷರು ಈಶ್ವರಪ್ಪ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈಶ್ವರಪ್ಪ ಶವ ಇಟ್ಟುಕೊಂಡು ರಾಜಕೀಯ ಮಾಡಿದ್ದಾರೆ. 144 ಸೆಕ್ಷನ್ ಜಾರಿ ಇದ್ದರೂ ಶವಯಾತ್ರೆಯಲ್ಲಿ ಭಾಗಿಯಾಗಿ ಕಾನೂನು ಉಲ್ಲಂಘಿಸಿದ್ದಾರೆ ಅದಕ್ಕೂ ಕ್ರಮ ತೆಗೆದುಕೊಳ್ಳಬೇಕಿತ್ತು.ಕ್ರಮ ಕೈಗೊಳ್ಳದ ಹಿನ್ನಲೆ ರಾಜ್ಯಪಾಲರನ್ನು ಭೇಟಿ ಮಾಡಿ ಈಶ್ವರಪ್ಪ ವಜಾ ಮಾಡಲು ಮನವಿ ಮಾಡಿದ್ದೇವೆ ಎಂದಿದ್ದಾರೆ.