ಬೆಂಗಳೂರು, ಫೆ 25 (DaijiworldNews/HR): ಉಕ್ರೇನ್ನಲ್ಲಿ ಸಿಕ್ಕಿಕೊಂಡಿರುವ ಕರ್ನಾಟಕದ ವಿದ್ಯಾರ್ಥಿಗಳೆಲ್ಲರೂ ಸುರಕ್ಷಿತವಾಗಿ ಇದ್ದು, ಎಲ್ಲರ ಜತೆ ನಮ್ಮ ರಾಯಭಾರಿ ಕಚೇರಿ ಅಧಿಕಾರಿಗಳು ಸಂಪರ್ಕದಲ್ಲಿ ಇದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇಂದು ನಮ್ಮ ವಿದೇಶಾಂಗ ಸಚಿವ ಜೈಶಂಕರ್ ಅವರ ಜತೆ ಮಾತಾಡಿದ್ದೇನೆ. ಸಂಪೂರ್ಣ ವಿವರಗಳನ್ನು ಅವರು ಪಡೆದುಕೊಂಡಿದ್ದಾರೆ. ಕರ್ನಾಟಕದ ಬಹಳಷ್ಟು ಮಕ್ಕಳು ಮೆಡಿಕಲ್ ಕಲಿಯಲು ಹೋಗಿದ್ದಾರೆ. ಆ ವಿದ್ಯಾರ್ಥಿಗಳು ನಮ್ಮ ಸಂಪರ್ಕದಲ್ಲಿ ಇದ್ದು, ಅವರನ್ನು ಕರೆತರಲು ಭಾರತ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.
ಇನ್ನು ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್ ಗೆ ಕಳುಹಿಸಿದ್ದು, ಅಲ್ಲಿಂದ ವಿದ್ಯಾರ್ಥಿಗಳನ್ನು ರಸ್ತೆಯ ಮಾರ್ಗದಲ್ಲಿ ಸ್ಥಳಾಂತರ ಮಾಡುವ ಪ್ರಯತ್ನಗಳು ಆಗುತ್ತಿವೆ. ವಾಯು ಮಾರ್ಗದ ಮೂಲಕ ಸ್ಥಳಾಂತರ ಆಗುತ್ತಿಲ್ಲ. ಈ ಸಂಬಂಧ ವಿದೇಶಾಂಗ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ ಎಂದಿದ್ದಾರೆ.
ಇನ್ನು ಊಟ, ತಿಂಡಿಯ ವ್ಯವಸ್ಥೆ ಮಾಡುವಂತೆ ಹೇಳಿದ್ದೇವೆ. ನಮ್ಮ ಸರ್ಕಾರವೂ ಹೆಲ್ಪ್ ಲೈನ್ ಆರಂಭಿಸಿದೆ. ಭಾರತ ಸರ್ಕಾರವೂ ಹೆಲ್ಪ್ ಲೈನ್ ಆರಂಭಿಸಿದೆ ಎಂದು ಹೇಳಿದ್ದಾರೆ.