ಬೆಂಗಳೂರು, ಫೆ 24 (DaijiworldNews/MS): ಕೆಪಿಸಿಸಿ ಅಧ್ಯಕ್ಷರು ಮತ್ತೆ ಮೇಕೆದಾಟು ಎಂಬ ಸುಳ್ಳಿನ ಜಾತ್ರೆ ಆರಂಭಿಸಲು ಸಿದ್ಧತೆ ನಡೆಸಿದ್ದು ಇವರ ರಾಜಕೀಯ ಡೊಂಬರಾಟಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಘಟಕವು, "ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ಮುಂದೆ ಸಾಗದ ಮೇಕೆದಾಟು ಯೋಜನೆ, ಬಿಜೆಪಿ ಕಾಲದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ.ಆದರೂ ಕೆಪಿಸಿಸಿ ಅಧ್ಯಕ್ಷರು ಮತ್ತೆ ಮೇಕೆದಾಟು ಎಂಬ ಸುಳ್ಳಿನ ಜಾತ್ರೆ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ಇವರ ರಾಜಕೀಯ ಡೊಂಬರಾಟಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದೆ.
ಮೇಕೆದಾಟು ಬಗ್ಗೆ ಭಾರೀ ಕಾಳಜಿ ತೋರ್ಪಡಿಸುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರು ಸದನದೊಳಗೆ ಒಮ್ಮೆಯೂ ಮಾತನಾಡದೆ ಧರಣಿಯ ಮೂಲಕ ಸದನದ ಸಮಯ, ಜನರ ತೆರಿಗೆ ಹಣ ಪೋಲು ಮಾಡಿದರು. ಡಿಕೆಶಿಯವರೇ, ಆಗೆಲ್ಲ ನಿಮಗೆ ನಮ್ಮ ನೀರು, ನಮ್ಮ ಹಕ್ಕು ಎಂಬ ನಾಟಕೀಯ ಘೋಷಣೆಯ ನೆನಪಾಗಿಲ್ಲವೇಕೆ? ಎಂದು ಪ್ರಶ್ನಿಸಿದೆ.
ಮಾನ್ಯ ಡಿ.ಕೆ ಶಿವಕುಮಾರ್ ಅವರೇ, ಮೇಕೆದಾಟು ಪಾದಯಾತ್ರೆಯನ್ನು ರಾಮನಗರದಿಂದ ಬೆಂಗಳೂರಿಗೆ ನಡೆಸುವ ಬದಲಾಗಿ ರಾಮನಗರದಿಂದ ತಮಿಳುನಾಡಿಗೆ ಮಾಡಬೇಕಿತ್ತು.ಏಕೆಂದರೆ ಸಮಸ್ಯೆಯ ಮೂಲ ಇರುವುದೇ ತಮಿಳುನಾಡಿನಲ್ಲಿ. ಮೇಕೆದಾಟು ವಿಚಾರವನ್ನು ಸುಪ್ರೀಂ ಅಂಗಳಕ್ಕೆ ಒಯ್ದಿರುವ ನಿಮ್ಮ ಮಿತ್ರ ಪಕ್ಷದ ಸರ್ಕಾರವನ್ನು ಮೊದಲು ಒಪ್ಪಿಸಿ.ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆ ನೇರವಾಗಿ ತಮಿಳುನಾಡು ಸಿಎಂ ಸ್ಟ್ಯಾಲಿನ್ ಬಳಿ ತೆರಳಬೇಕು.ಏಕೆಂದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ ಮೈತ್ರಿ ಸರ್ಕಾರವಿದೆ. ಪಾದಯಾತ್ರೆಯ ಉದ್ಘಾಟನೆಗೆ ತಮಿಳುನಾಡು ಸಿಎಂ ಕರೆ ತರುವ ಸಾಮರ್ಥ್ಯ ನಿಮಗೆ ಇದೆಯಾ? ಎಂದು ಕುಹಕವಾಡಿದೆ.