ನವದೆಹಲಿ, ಫೆ 24 (DaijiworldNews/MS): ರಷ್ಯಾ-ಉಕ್ರೇನ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಭಾರತೀಯರನ್ನು ಸ್ವದೇಶಕ್ಕೆ ಕರೆತರಲೆಂದು ಇಂದು ಗುರುವಾರ ಬೆಳಗ್ಗೆ ಉಕ್ರೇನ್ನ ಕೈವ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಅಲ್ಲಿಗೆ ತೆರಳಲಾಗದೇ ಹಿಂದಿರುಗಿದೆ.
ಏರ್ ಇಂಡಿಯಾ ವಿಮಾನವು ರಷ್ಯಾದ ಮಿಲಿಟರಿ ದಾಳಿಯ ಮಧ್ಯೆ ಉಕ್ರೇನ್ ನಲ್ಲಿ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ದೆಹಲಿಗೆ ಹಿಂತಿರುಗಿದೆ.
ಇಂದು ಬೆಳಗ್ಗೆ 7.30ರ ಸುಮಾರಿಗೆ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ವಿಮಾನ ಕೈವ್ ನ ಬೊರಿಸ್ಪಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿತ್ತು, ಆದರೆ ಅಲ್ಲಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ವಾಪಸಾಗಿದೆ.
ಸಾವಿರಾರರು ಭಾರತೀಯರು ಉಕ್ರೇನ್ನಲ್ಲಿ ಸಿಲುಕಿದ್ದು, ಸ್ವದೇಶಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದೆಡೆ ಉಕ್ರೇನ್ ವಾಯುಪ್ರದೇಶ ಸಂಪೂರ್ಣವಾಗಿ ಮುಚ್ಚಿರುವ ಹಿನ್ನೆಲೆಯಲ್ಲಿ ಕೈವ್ಗೆ ವಿಶೇಷ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.