ಬೆಂಗಳೂರು, ಫೆ 24 (DaijiworldNews/MS): ರಾಜ್ಯದಲ್ಲಿ ಪಿಎಫ್ಐ, ಎಸ್ಡಿಪಿಐ ಬೆಳೆಯುವುದಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದು ಬಿಜೆಪಿ ಆರೋಪಿಸಿದ್ದು ಅವರನ್ನು ಸಮಾಜ ಕ್ಷಮಿಸುವುದಿಲ್ಲ ಎಂದು ಹೇಳಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ನಮ್ಮ ಬಳಿ ಮಸಲ್ ಪವರ್ ಇದೆ, ಮನಿ ಪವರ್ ಇದೆ ಎಂದು ಎಸ್ಡಿಪಿಐ ಸಮಾಜಕ್ಕೆ ಬೆದರಿಕೆ ಹಾಕುತ್ತಿದೆ.ಇವರು ಈ ಹಂತಕ್ಕೆ ಬೆಳೆದು ನಿಲ್ಲಲು ಸಿದ್ದರಾಮಯ್ಯ ಅವರೇ ನೇರ ಕಾರಣ.ಪಿಎಫ್ಐ, ಎಸ್ಡಿಪಿಐ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಕೈ ಬಿಟ್ಟು ಪಾತಕಿಗಳನ್ನು ಪೋಷಿಸಿದ ಸಿದ್ದರಾಮಯ್ಯ ಅವರನ್ನು ಸಮಾಜ ಕ್ಷಮಿಸುವುದಿಲ್ಲ ಎಂದಿದೆ.
ಅಲ್ಪಸಂಖ್ಯಾತರ ಓಲೈಕೆಯ ಅಮಲಿಗೆ ಬಿದ್ದಿದ್ದ ಸಿದ್ದರಾಮಯ್ಯನವರಿಗೆ ಎಸ್ಡಿಪಿಐ ಸಮಾಜ ಘಾತುಕ ಎಂದು ತಿಳಿದಿತ್ತು, ಆದರೂ ಮತಬ್ಯಾಂಕ್ ರಾಜಕಾರಣಕ್ಕೆ ಹೆದರಿ ಪೋಷಿಸಿದರು.ತಿಳಿದು ತಿಳಿದೂ ತಪ್ಪು ಮಾಡುವ, ಕಣ್ಣಿದ್ದು ಕುರುಡರಂತೆ ವರ್ತಿಸುವ ಸಿದ್ದರಾಮಯ್ಯ ಅವರ ಚಾಳಿಗೆ ಇಂದು ಸಮಾಜ ಬೆಲೆ ತೆರುತ್ತಿದೆ, ಕಾಂಗ್ರೆಸ್ ಕೂಡಾ! ಎಂದು ಟ್ವೀಟ್ ಮಾಡಿದೆ.
ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಇಬ್ಬರು ಗೃಹ ಮಂತ್ರಿಗಳು ಕಾರ್ಯ ನಿರ್ವಹಿಸಿದ್ದರು.ಆದರೆ ಒಬ್ಬರಿಗೂ ಎಸ್ಡಿಪಿಐ , ಪಿಎಫ್ಐ ವಿರುದ್ಧದ ಪ್ರಕರಣಗಳನ್ನು ಕೈ ಬಿಡುವುದು ಸರಿಯಲ್ಲ ಎಂದು ಅನ್ನಿಸಲೇ ಇಲ್ಲ.ಅಂದು ಕಾಂಗ್ರೆಸ್ ಮಾಡಿದ ತಪ್ಪಿನಿಂದಾಗಿ ಸಮಾಜ ಇಂದು ಬೆಲೆ ತೆರುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.