ಬೆಂಗಳೂರು, ಫೆ 24 (DaijiworldNews/HR): ರಾಜ್ಯದಲ್ಲಿ ಹಿಜಾಬ್ ವಿವಾದಕ್ಕೆ ಸಂಬಧಿಸಿದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿರುವ ಬೆನ್ನಲ್ಲೇ ಇದೀಗ ಸಿಖ್ ಟರ್ಬನ್ ತೆಗೆಯುವಂತೆ ವಿದ್ಯಾರ್ಥಿನಿಗೆ ಕಾಲೇಜೊಂದು ಸೂಚಿಸಿರುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ತಿಯವರನ್ನು ಒಳಗೊಂಡಂತ ತ್ರಿಸದಸ್ಯ ಪೇಠವು ಹಿಜಾಬ್ ಅನುಮತಿ ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದು, ಈ ಮಧ್ಯೆ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಉಡುಪು ಧರಿಸದಂತೆ ಕೋರ್ಟ್ ಮಧ್ಯಂತರ ಆದೇಶವನ್ನು ನೀಡಿತ್ತು.
ಇನ್ನು ಈ ಆದೇಶದ ಹಿನ್ನಲೆಯಲ್ಲಿ ಬೆಂಗಳೂರಿನ ಮೌಂಟ್ ಕಾರ್ಮೆಲ್ ಪಿಯು ಕಾಲೇಜು, ಅಮೃತಧಾರಿ ಸಿಖ್ ಆಗಿರುವಂತ 17 ವರ್ಷದ ವಿದ್ಯಾರ್ಥಿನಿಗೆ ತರಗತಿಗಳಿಗೆ ಹಾಜರಾಗುವ ಮುನ್ನಾ ತನ್ನ ಟರ್ಬನ್ ತೆಗೆದಿರಿಸುವಂತೆ ಹೇಳಿದೆ ಎನ್ನಲಾಗುತ್ತಿದೆ.
ಈ ಕುರಿತು ವಿದ್ಯಾರ್ಥಿನಿಯ ತಂದೆ ಗುರುಚರಣ್ ಸಿಂಗ್ ಪ್ರತಿಕ್ರಿಯಿಸಿ, ಫೆಬ್ರವರಿ 16 ರಂದು ಕಾಲೇಜು ಆಡಳಿತವು ತರಗತಿಯಲ್ಲಿ ಕುಳಿತುಕೊಳ್ಳುವ ಮುನ್ನಾ ಟರ್ಬನ್ ತೆಗೆಯುವಂತೆ ತಿಳಿಸಿದೆ. ಆದರೆ ಅವಳು ಅಮೃತಧಾರಿ ಸಿಖ್ ಆಗಿ ದೀಕ್ಷೆ ಪಡೆದಿದ್ದಾಳೆ. ಇದು ನಮ್ಮ ನಂಬಿಕೆಯ ಅವಿಭಾಜ್ಯ ಅಂಗವಾಗಿದೆ. ನಾವು ಟರ್ಬನ್ ಧರಿಸದೆ ಎಂದಿಗೂ ಹೊರಗೆ ಹೋಗುವುದಿಲ್ಲ. ಆ ದಿನವೇ ನಾನು ಕಾಲೇಜು ಆಡಳಿತಕ್ಕೆ ಇಮೇಲ್ ಕಳುಹಿಸಿದ್ದೆ ಎಂದರು.
ಇನ್ನು ಕಾಲೇಜಿನಿಂದ ತನ್ನ ಇಮೇಲ್ ಗೆ ಉತ್ತರ ಬರದಿದ್ದರೂ, ತನ್ನ ಮಗಳು ಎಂದಿನಂತೆ ತರಗತಿಗಳಿಗೆ ಹಾಜರಾಗುತ್ತಿದ್ದಾಳೆ ಎಂದು ತಿಳಿಸಿದ್ದಾರೆ.