ನವದೆಹಲಿ, ಫೆ 24 (DaijiworldNews/MS): ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ ಭಾರತ ಸರ್ಕಾರ ಮೊದಲ ಪ್ರತಿಕ್ರಿಯೆ ನೀಡಿದೆ. ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆ ಸಚಿವ ಡಾ.ರಾಜಕುಮಾರ್ ರಂಜನ್ ಸಿಂಗ್, 'ಭಾರತದ ನಿಲುವು ತಟಸ್ಥವಾಗಿರಲಿದೆ ಮತ್ತು ಶಾಂತಿಯುತ ಪರಿಹಾರವನ್ನು ನಿರೀಕ್ಷಿಸುತ್ತೇವೆ' ಎಂದು ತಿಳಿಸಿದ್ದಾರೆ.
ಈ ಹಿಂದೆ ಉಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ತಳೆದ ನಡೆಯನ್ನು ರಷ್ಯಾ ಸ್ವಾಗತಿಸಿತ್ತು.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಸೇನಾ ದಾಳಿ ನಡೆಸುವುದಾಗಿ ಘೋಷಿಸಿದ ಬೆನ್ನಲ್ಲೇ ಭಾರತ ಈ ಅಧಿಕೃತ ಹೇಳಿಕೆಯನ್ನು ನೀಡಿದ್ದು, ಉಕ್ರೇನ್ ಮೇಲೆ ಎರಡೂ ಕಡೆಯಿಂದ ಭೀಕರ ಯುದ್ಧ ಆರಂಭವಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದ ನಂತರ, ಭಾರತ ಸರ್ಕಾರ ಮತ್ತೊಮ್ಮೆ ತನ್ನ ಅಧಿಕೃತ ನಿಲುವನ್ನು ವ್ಯಕ್ತಪಡಿಸಿದ್ದು ಉಕ್ರೇನ್-ರಷ್ಯಾ ಬಿಕ್ಕಟ್ಟಿನ ಕುರಿತು ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಡಾ. ರಾಜ್ಕುಮಾರ್ ರಂಜನ್ ಸಿಂಗ್, "ಭಾರತದ ನಿಲುವು ತಟಸ್ಥವಾಗಿದೆ ಮತ್ತು ನಾವು ಶಾಂತಿಯುತ ಪರಿಹಾರವನ್ನು ನಿರೀಕ್ಷಿಸುತ್ತೇವೆ" ಎಂದು ಹೇಳಿದರು.